ಸಹಕಾರಿ ಸಂಸ್ಥೆಗಳ ಬಲವರ್ಧನೆಗೆ ಸಹಕರಿಸಿ

ಕೋಲಾರ,ನ,೧೬- ರೈತರು, ಮಹಿಳೆಯರು ಪಡೆದುಕೊಂಡಿರುವ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಸಹಕಾರಿ ಸಂಘಗಳಿಗೆ ಶಕ್ತಿ ತುಂಬಿ, ಮತ್ತಷ್ಟು ಮಂದಿಗೆ ಸಾಲ ಸೌಲಭ್ಯ ಸಿಗುವಂತಾಲು ಸಹಕರಿಸಿ ಎಂದು ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಕರೆ ನೀಡಿದರು.
ತಾಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ ಸಂಘದ ಸಭಾಂಗಣದಲ್ಲಿ ಬುಧವಾರ ರೈತರಿಗೆ ೧.೧೧ ಕೋಟಿ ಕೆಸಿಸಿ ನವೀಕರಣ ಸಾಲದ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಆಡಳಿತ ಮಂಡಳಿ ಸಹಕಾರ ಹಾಗೂ ಸಿಬ್ಬಂದಿಯ ಪ್ರಮಾಣಿಕತೆಯಿಂದ ಸಂಘದಿಂದ ೩೦ ಕೋಟಿಗೂ ಅಧಿಕ ವಿವಿಧ ರೀತಿಯ ಸಾಲ ವಿತರಣೆ ಮಾಡಲಾಗಿದೆ. ಬೆಳೆ ಬೆಳೆಯುವ ಅರ್ಹ ರೈತರಿಗೆ ಸಾಲ ವಿತರಣೆ ಮಾಡಲಾಗಿತ್ತು, ಅವರು ಪ್ರಾಮಾಣಿಕವಾಗಿ ಸಕಾಲಕ್ಕೆ ಕಂತನ್ನು ಪಾವತಿ ಮಾಡಿದ ಕಾರಣದಿಂದ ಮತ್ತೆ ಸಾಲ ನೀಡಲಾಗಿದೆ, ಸಂಘದ ವ್ಯಾಪ್ತಿಯಲ್ಲಿನ ರೈತರು ಬೇರೆಯವರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಸಾಲ ಮನ್ನಾದಂತಹ ಸುಳ್ಳು ಹೇಳಿಕೆಗಳಿಗೆ ತಲೆ ಕೆಡಿಸಿಕೊಳ್ಳದಿರಿ, ನೀವು ಸಾಲದ ಕಂತು ಸಕಾಲಕ್ಕೆ ಮಾರು ಪಾವತಿ ಮಾಡದಿದ್ದರೆ ಶೂನ್ಯ ಬಡ್ಡಿ ಸಾಲಕ್ಕೂ ಬಡ್ಡಿ ಬೀಳುತ್ತದೆ, ಆ ಹೊರೆ ನಿಮ್ಮ ತಲೆ ಮೇಲೆ ಬೀಳುವುದರಿಂದ ವದಂತಿಗಳಿಗೆ ಕಿವಿಗೊಡದಿರಿ, ಸಾಲ ಮರುಪಾವತಿಸಿ ಎಂದರು.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಾಲ ಮನ್ನಾ ಘೋಷಣೆ ಮಾಡಿದ್ದರು, ಸಂಘದಿಂದ ಬೆಳೆ ಸಾಲ ಪಡೆದುಕೊಂಡಿದ್ದ ರೈತರ ಸಾಲ ೫ ಕೋಟಿ ಮನ್ನಾ ಆಯಿತು ಎಂದು ಸ್ಮರಿಸಿದರು.
ಮುಂಬರುವ ಚುನಾವಣೆಗೂ ಮುನ್ನ ನಡೆದ ೫ ಸರ್ವ ಸದಸ್ಯರ ಸಭೆಯಲ್ಲಿ ಕನಿಷ್ಠ ೨ ಸಭೆಗೆ ಹಾಜರಾಗಿರಬೇಕು, ಇದರ ಜತೆಗೆ ವ್ಯವಹಾರ ನಡೆಸಿರಬೇಕು, ಸುಸ್ತಿದಾರರು ಆಗಿರಬಾರದು, ಇದನ್ನೆಲ್ಲ ಉಲ್ಲಂಘನೆ ಮಾಡಿದ್ದರೆ ಮತದಾನದ ಹಕ್ಕು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಷೇರು ನೋಂದಣಿಗೆ ೫೦೦ರೂ ಪಾವತಿಸಿರುವರು ಇನ್ನು ಹೆಚ್ಚುವರಿಯಾಗಿ ೫೦೦ರೂ ಜಮಾ ಮಾಡಬೇಕು.ಸರ್ಕಾರವು ಕೃಷಿ ಪತ್ತಿನ ಸಹಕಾರ ಸಂಘದ ಷೇರು ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪ್ರತಿಯೊಬ್ಬರು ಸರ್ಕಾರಿ ಆದೇಶವನ್ನು ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಮಹಿಳೆಯರು, ರೈತರು ಸಹಕಾರಿ ಬ್ಯಾಂಕಿನ ಶಕ್ತಿ ಎಂದರೆ ತಪ್ಪಾಗಲಾರದು. ಪಡೆದುಕೊಂಡ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದ ಹಿನ್ನೆಲೆಯಲ್ಲಿ ಸಂಘಗಳು ಆರ್ಥಿಕವಾಗಿ ಬಲವಾಗುತ್ತವೆ ಎಂದರು.
ಈ ಸಂದರ್ಭದಲ್ಲಿ ಸಿಇಒ ಮುನೀಶಪ್ಪ, ಪ್ರಶಾಂತ್, ನಾಗೇಶ್ ಮತಿತರರು ಹಾಜರಿದ್ದರು.