ಸಹಕಾರಿ ಬ್ಯಾಂಕ್‌ನಲ್ಲಿ ಎಸಿ ಸ್ಫೋಟ ತಪ್ಪಿದ ಭಾರೀ ಅನಾಹುತ


ಮಂಗಳೂರು, ಎ.೨೦- ಬಜ್ಪೆಯ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಎಸಿಯಲ್ಲಿ ಸ್ಫೋಟ ಸಂಭವಿಸಿ ಬ್ಯಾಂಕ್‌ನಲ್ಲಿ ದಟ್ಟ ಹೊಗೆ ಆವರಿಸಿದ, ಬಳಿಕ ಸಕಾಲದ ಕಾರ್ಯಾಚರಣೆಯಿಂದ ಸಂಭಾವ್ಯ ಅನಾಹುತವೊಂದು ತಪ್ಪಿದ ಘಟನೆ ನಿನ್ನೆ ಬೆಳಗ್ಗೆ ನಡೆದಿದೆ.
ನಿನ್ನೆ ಬೆಳಗ್ಗೆ ಕಚೇರಿಯ ಬೀಗ ತೆರೆದು ಸ್ವಿಚ್ ಹಾಕಿದಾಗ ಎ.ಸಿ.ಯಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಿಸಿತೆನ್ನಲಾಗಿದೆ. ಇದರಿಂದ ಎಸಿಗೆ ಹಾನಿಯಾಗಿದೆ. ಕೂಡಲೇ ಸಮೀಪದ ಎಸ್‌ಇಝೆಡ್, ವಿಮಾನ ನಿಲ್ದಾಣ ಹಾಗೂ ಮಂಗಳೂರಿನ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಅಗ್ನಿಶಾಮಕ ದಳದ ಮೂರು ವಾಹನಗಳಲ್ಲಿ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಬ್ಯಾಂಕ್ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಬೆಂಕಿ ಅವಘಡದಿಂದ ಯಾವುದೇ ದಾಖಲೆ ಪತ್ರಗಳಿಗೆ ಹಾನಿಯಾಗಿಲ್ಲ. ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದೇವೆ. ಅರ್ಧಗಂಟೆಯೊಳಗೆ ಬೆಂಕಿ ನಂದಿಸಿದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಬ್ಯಾಂಕ್‌ನ ಕಟ್ಟಡಕ್ಕೆ ಗಾಜಿನ ಇಂಟೀರಿಯರ್ ಅಳವಡಿಸಿದ್ದರಿಂದ ದಟ್ಟ ಹೊಗೆ ಕಾಣಿಸಿತು. ಹಾಗಾಗಿ ಗಾಜನ್ನು ಒಡೆದು ಹಾಕಬೇಕಾಯಿತು ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಬ್ಯಾಂಕ್‌ನ ಕಂಪ್ಯೂಟರ್ ಹಾಗೂ ದಾಖಲೆಗಳಿಗೆ ಹಾನಿ ಉಂಟಾಗಿಲ್ಲ ಎನ್ನಲಾಗಿದೆ. ಬಜಪೆ ಪೊಲೀಸರು ಹಾಗೂ ಸಾರ್ವಜನಿಕರು ಕಾರ್ಯಾಚರಣೆಯಲ್ಲಿ ಸಹಕರಿಸಿದರು.