ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಮುಖ್ಯ: ದೊಡ್ಡಪ್ಪ ದೇಸಾಯಿ

ಗಂಗಾವತಿ ನ.19: ಸಹಕಾರಿ ಕ್ಷೇತ್ರ ಅತಿಮುಖ್ಯ ಕ್ಷೇತ್ರವಾಗಿದ್ದು, ಇಲ್ಲಿನ ಪ್ರತಿನಿಧಿಗಳು ನಿಸ್ವಾರ್ಥ ಸೇವೆ ಸಲ್ಲಿಸಿದರೆ ಸಾಕು ಇಡೀ ರೈತ ಸಮೂಹ ಏಳಿಗೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಹೇಳಿದರು.
ತಾಲೂಕಿನ ಶ್ರೀರಾಮನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀರಾಮನಗರ ಗ್ರಾಮದಲ್ಲಿ ಇದುವರೆಗೂ ಪ್ರಾಥಮಿಕ ಕೃಷಿ ಪತ್ತಿನ ಚುನಾವಣೆಯಲ್ಲಿ ಯಾವುದೇ ಗೊಂದಲವಿಲ್ಲದೇ ಎಲ್ಲಾ ನಿರ್ದೇಶಕರು, ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಇದೇ ನಿಟ್ಟಿನಲ್ಲಿ ಸಂಘದ ಎಲ್ಲಾ ನಿರ್ದೇಶಕರು ಪರಿಶ್ರಮದಿಂದ ನಿಸ್ವಾರ್ಥ ಸೇವೆ ಸಲ್ಲಿಸಿದರೆ ಶ್ರೀರಾಮನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಭಿವೃದ್ದಿಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಎಪಿಎಂಸಿ ಸದಸ್ಯ ರಡ್ಡಿ ಶ್ರೀನಿವಾಸ ಮಾತನಾಡಿ, ಸದ್ಯ ಶ್ರೀರಾಮನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದು, ಇದರ ಬಗ್ಗೆ ಎಲ್ಲಾ ನಿರ್ದೇಶಕರ ಮನವಿ ಮೇರೆಗೆ ಶ್ರೀರಾಮನಗರ ಎಪಿಎಂಸಿಯಲ್ಲಿ ಜಾಗ ಒದಗಿಸುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.
ನೂತನ ಅಧ್ಯಕ್ಷರಾಗಿ ಪಿ. ವೆಂಕಟೇಶ್ವರಾವ್, ಉಪಾಧ್ಯಕ್ಷರಾಗಿ ಬಿ. ವಿಜಯಲಕ್ಷ್ಮೀ ಕಲ್ಕಿಮೂರ್ತಿ ಅಧಿಕಾರ ಸ್ವೀಕಾರ ಮಾಡಿದರು. ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ್ ಅಧ್ಯಕ್ಷ ಮಹಮ್ಮದ್ ರಫಿ, ಚುನಾವಣಾಧಿಕಾರಿ ಪರಶುರಾಮಗಡ್ಡಿ, ಆರ್.ಡಿ.ಸಿ.ಸಿ ಉಪಾಧ್ಯಕ್ಷ ಪಂಪಾಪತಿ ಸಿಂಗನಾಳ್, ಶ್ರೀರಾಮನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತಾಧಿಕಾರಿ ಶಿವರುದ್ರಸ್ವಾಮಿ, ನಿರ್ದೆಶಕರಾದ ವೈ. ನಾಗರಾಜ್, ಮಲ್ಲಿಕಾರ್ಜುನ ನಾಯಕ, ಜಿ. ಸುರೇಶ್, ಸಿಂಹಾದ್ರಿ ಶ್ರೀನಿವಾಸ, ಎಮ್ ರಮೇಶ್, ಎ. ರಾಮಕೃಷ್ಣರಾಜು, ಮಹಮ್ಮದ್ ಅಲಿ, ಆನಂದಕುಮಾರ್, ಎಮ್. ವನಜಾಕ್ಷಿ, ಸಂಘದ ಕಾರ್ಯದರ್ಶಿ ಸ್ವರ್ಣಪ್ರಕಾಶ್, ರಾಧಮ್ಮ, ಶ್ರೀರಾಮನಗರ ಗ್ರಾ.ಪಂ ಮಾಜಿ ಅಧ್ಯಕ್ಷ ಕೆ. ಶ್ರೀನಿವಾಸ, ಕೆ. ನಾಗೇಶ್ವರಾವ್, ಗೋಪಿ, ಹಲಪಾಟಿ ಸೂರಿಬಾಬು, ನಲ್ಲಾ ಚಂದ್ರರಾವ್, ಪ್ರಸಾದ್, ಶ್ಯಾಮೂರ್ತಿ, ಜಿಲ್ಲಾ ಸಹಕಾರಿ ಯೂನಿಯನ್ ಸದಸ್ಯ ಸತ್ಯನಾರಾಯಣ ಇದ್ದರು.