ಸಹಕಾರಿಗಳಿಗೆ ಆನ್‍ಲೈನ್ ತರಬೇತಿ

ಹೊಸಪೇಟೆ ಮೇ31: ಲೆಕ್ಕ ಪರಿಶೋಧಕರು ಬಂದು ದಾಖಲೆಗಳನ್ನು ಕೇಳುವ ಪೂರ್ವದಲ್ಲಿಯೇ ಬೇಕಾಗಬಹುದಾದ ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಕೊಳ್ಳುವ ಮೂಲಕ ಉತ್ತಮ ಸಹಕಾರಿಯಾಗಿ ನಿರೂಪಿಸಬೇಕಾಗಿದೆ ಎಂದು ಹಿರಿಯ ಲೆಕ್ಕ ಪರಿಶೋಧಕ ಸುನೀಲ ಪತ್ತಾರ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳ, ಬಳ್ಳಾರಿ ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಹಯೋಗದಲ್ಲಿ ಬಳ್ಳಾರಿ ಜಿಲ್ಲೆಯ ಸಹಕಾರಿ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಗೆ ಆನ್‍ಲೈನ್ ನಲ್ಲಿ ಆಯೋಜಿಸಿದ್ದ “ಲೆಕ್ಕಪರಿಶೋಧನೆಗೆ ಪೂರ್ವ ತಯಾರಿ” ಗಳ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಅವರು ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಸಹಕಾರಿಯ ಆರ್ಥಿಕ ವರ್ಷ ಅಂತ್ಯವಾಗುತ್ತಿದ್ದಂತೆಯೇ ಎಲ್ಲಾ ವ್ಯವಹಾರಗಳನ್ನು ಹೊಂದಿಕೆ ಮಾಡಿಕೊಂಡು, ಆಡಳಿತ ಮಂಡಳಿಯ ಮುಂದೆ ಮಂಡಿಸಿ ಲೆಕ್ಕಪರಿಶೋಧನೆಗೆ ಮುಂದಾಗಬೇಕು ಇದು ಲೆಕ್ಕಪರಿಶೋಧಕರು ಕೇಳುವ ಎಲ್ಲಾ ದಾಖಲೆಗಳನ್ನು ಮಂಡಿಸಲು ಸಹಕಾರಿಯಾಗಲಿದೆ ಎಂದರು.
ಬಳ್ಳಾರಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕಿ ಡಾ.ಸುನೀತಾ ಸಿದ್ದರಾಮ್ ಮಾತನಾಡಿ ಸಹಕಾರಿಗಳು ಲೆಕ್ಕಪರಿಶೋಧನೆಯಲ್ಲಿ ತಮ್ಮ ಸಹಕಾರಿಯ ಸಾಮಥ್ರ್ಯ ತೋರಬೇಕಾಗಿರುವುದರಿಂದ ಎಲ್ಲಾ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕು  ಇಲಾಖಾಧಿಕಾರಿಗಳು ಮಾರ್ಗದರ್ಶನ ಮಾಡಲಿದ್ದು ಹಿಂದೆ ಆದ ತಪ್ಪುಗಳನ್ನು ತಿದ್ದಿಕೊಂಡು ಸಹಕಾರಿಯನ್ನು ಉತ್ತಮವಾಗಿ ನಿರ್ವಹಿಸಲು ತರಬೇತಿ ಸಹಕಾರಿಯಾಗಲಿದೆ ಎಂದರು. ಕೋವಿಡ್‍ನ ಈ ಸಂದರ್ಭದಲ್ಲಿ ಇಂತಹ ಉತ್ತಮ ಕಲಿಕೆಗೆ ನಿಗದಿ ಮಾಡುವ ಮೂಲಕ ಸಹಕಾರಿಯ ಬಲವರ್ಧನೆಗೆ ಬಳಸಿಕೊಳ್ಳಬೇಕು ಎಂದರು.
ಜಿಲ್ಲಾ ಯೂನಿಯನ್ ಅಧ್ಯಕ್ಷ ಹಾಗೂ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜೆ.ಎಂ.ಶಿವಪ್ರಸಾದ ಉದ್ಘಾಟಿಸಿ ಮಾತನಾಡಿ ಶುಭಕೋರಿದರು.
ಜಿಲ್ಲಾ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ನಾಗರಾಜ್, ಸಿಬ್ಬಂದಿಗಳು ಸೇರಿದಂತೆ ಅವಿಭಾಜಿತ ಬಳ್ಳಾರಿ ಜಿಲ್ಲೆಯ 80ಕ್ಕೂ ಹೆಚ್ಚು ಸಹಕಾರಿ ಸಂಘಗಳು ಕಾರ್ಯದರ್ಶಿಗಳು, ಸಿಬ್ಬಂದಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.