ಸಹಕಾರದಿಂದ ಅಭಿವೃದ್ಧಿ ಸಾಧ್ಯ-ಪಾಟೀಲ

ಲಕ್ಷ್ಮೇಶ್ವರ,ನ20: ‘ಪರಸ್ಪರ ಸಹಕಾರದಿಂದ ಪ್ರಗತಿ ಸಾಧಿಸಲು ಸಾಧ್ಯ. ಏಷ್ಯಾ ಖಂಡದಲ್ಲಿ ಪ್ರಪ್ರಥಮ ಬಾರಿಗೆ ಸಹಕಾರ ಸಂಘ ಸ್ಥಾಪನೆ ಆಗಿದ್ದು ಗದಗ ಜಿಲ್ಲೆ ಎಂಬುದು ನಮಗೆಲ್ಲ ಹೆಮ್ಮೆ’ ಎಂದು ಮಾಜಿ ಶಾಸಕ ಎಸ್.ಎನ್. ಪಾಟೀಲ ಹೇಳಿದರು.
ಇಲ್ಲಿನ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯ ಸಭಾಭವನದಲ್ಲಿ ಗುರುವಾರ ಜರುಗಿದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
‘ಸಂಘಗಳ ಸದಸ್ಯರು ಸಂಘಕ್ಕೆ ನಿಯತ್ತಿನಿಂದ ನಡೆದುಕೊಂಡಾಗ ಮಾತ್ರ ಅಂಥ ಸಂಘಗಳಿಂದ ಸಮಾಜಕ್ಕೆ ಒಳಿತಾಗುತ್ತದೆ. ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕುಗಳಲ್ಲಿ ಹಾಲು ಉತ್ಪಾದನಾ ಸಂಘಗಳು ಉತ್ತಮ ರೀತಿಯಿಂದ ಕೆಲಸ ಮಾಡುತ್ತಿವೆ. ಇದರಿಂದಾಗಿ ಎರಡೂ ತಾಲ್ಲೂಕುಗಳಲ್ಲಿ ಹೈನೋದ್ಯಮ ಚೆನ್ನಾಗಿ ಬೆಳೆದಿದೆ’ ಎಂದ ಅವರು ‘ಸಂಘಗಳಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರಳಿಸುವುದರ ಮೂಲಕ ಸಂಘ ಬೆಳೆಯಲು ಸಹಕಾರ ನೀಡುವುದು ಬಹಳ ಮುಖ್ಯ’ ಎಂದರು.
ಈ ಸಂದರ್ಭದಲ್ಲಿ ಫಕ್ಕೀರಪ್ಪ ಗುಡಗೇರಿ, ಬಸಣ್ಣ ಉಪನಾಳ, ಪ್ರಕಾಶ ಉಪನಾಳ, ಲಕ್ಷ್ಮೇಶ್ವರ ಕೆಸಿಸಿ ಬ್ಯಾಂಕಿನ ನಿರೀಕ್ಷಕ ಸುರೇಶ ಚೋಟಗಲ್ಲ, ನಂದಾ ಚೆನ್ನಪ್ಪ ಧರ್ಮಾಯತ, ಶಂಕ್ರಪ್ಪ ಗೊರವರ, ಬಿ.ವಿ. ಪಾಟೀಲ, ಎಸ್.ಬಿ. ಹಿರೇಮಠ, ಎಚ್.ಎ. ಬಂಡೆಣ್ಣವರ, ಶಿವರಾಜ ಕುಲಕರ್ಣಿ, ಎಚ್.ವಿ. ನಾಗೋಲಿ, ಬಸವರಾಜ ನಿಡಗುಂದಿಮಠ, ಬಸವರಾಜ ಜುಮ್ಮಣ್ಣವರ, ಎಸ್.ಬಿ. ಹಿರೇಮಠ, ಎಂ.ವಿ. ಚುರ್ಚಿಹಾಳ ಇದ್ದರು.