ಸಸ್ಯ ನರ್ಸರಿ ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳಿ: ರಾಜೇಂದ್ರ ಕುಮಾರ

ಮಹಿಳಾ ಸ್ವಸಹಾಯ ಗುಂಪಿನಿಂದ ಸಸ್ಯಕ್ಷೇತ್ರ ಅನುಷ್ಠಾನಕ್ಕೆ ಚಾಲನೆ
ರಾಯಚೂರು,ನ.೧೯- ಗ್ರಾಮೀಣ ಪ್ರದೇಶದ ಮಹಿಳಾ ಸ್ವ-ಸಹಾಯಕ ಗುಂಪುಗಳು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕ ರ್ಸ್ವಾವಲಂಬನೆಗೆ ಪೂರಕವಾಗಲು ಗ್ರಾಮ ಪಂಚಾಯಿತಿಗಳು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸರಕಾರಿ ಜಾಗದಲ್ಲಿ ಉಚಿತವಾಗಿ ಸಸ್ಯಕ್ಷೇತ್ರ (ನರ್ಸರಿ) ನಿರ್ಮಿಸಿ ಅದನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳುವಂತೆ ಸಿರವಾರ ತಾ.ಪಂ ಐಇಸಿ ಸಂಯೋಜಕ ರಾಜೇಂದ್ರ ಕುಮಾರ ಅವರು ತಿಳಿಸಿದರು.
ಅವರು ನ.೧೮ರ(ಶುಕ್ರವಾರ)ರಂದು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಾಡಗಿರಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪಿನಿಂದ ಸಸ್ಯಕ್ಷೇತ್ರ ಅನುಷ್ಠಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ತೋಟಗಾರಿಕೆ ಬೆಳೆ ಬೆಳೆಯುವ ರೈತರು ತಮಗೆ ಅಗತ್ಯವಾದ, ತೋಟಗಾರಿಕೆ ಸಸಿಗಳನ್ನು ಮುಂಗಡ ಹಣ ನೀಡಿ, ದೂರದ ನಗರ-ಪಟ್ಟಣದ ಖಾಸಗಿ ನರ್ಸರಿಗಳಿಂದ ಖರೀದಿಸಿ ತರುತ್ತಾರೆ. ಇದರ ಬಗ್ಗೆ ಸ್ವ ಸಹಾಯ ಸಂಘದ ಮಹಿಳೆಯರು ಅಂತಹ ರೈತರಿಗೆ ಮಾಹಿತಿ ನೀಡಿ, ಅಂತಹ ರೈತರಿಗೆ ಬೇಕಾದ ತೋಟಗಾರಿಕೆಯ ಉತ್ತಮ ಗುಣಮಟ್ಟದ ತಳೀಯ ಸಸಿಗಳನ್ನು ನಿಗದಿತ ದರದಲ್ಲಿ ವಿತರಿಸಲಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶದ ಮಹಿಳೆಯರು, ಮಕ್ಕಳು ಹಾಗೂ ಗರ್ಭಿಣಿಯರಲ್ಲಿ ಕಂಡು ಬರುವ ಅಪೌಷ್ಠಿಕತೆ ಹೊಗಲಾಡಿಸಲು ಸರಕಾರವು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನೋಂದಾಯಿತ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಅವರ ಮನೆಯ ಇತ್ತಲಿನಲ್ಲಿ ಇಲ್ಲವೆ ಖಾಲಿ ಜಾಗದಲ್ಲಿ ಸಂಘದ ಪ್ರತಿ ಸದಸ್ಯರಿಗೆ ಒಂದರಂತೆ ೧೦೧ ಪೌಷ್ಠಿಕ ಕೈತೋಟ ನಿರ್ಮಿಸಿಕೊಳ್ಳುವ ಗುರಿ ಹೊಂದಲಾಗಿದೆ. ಹೀಗಾಗಿ ಪೌಷ್ಟಿಕ ತೋಟ ನಿರ್ಮಿಸಿಕೊಂಡ ಪ್ರತಿ ಸದಸ್ಯೆರಿಗೆ ನುಗ್ಗೆ ಸಸಿಗಳನ್ನು ನರ್ಸರಿಯಲ್ಲಿ ಬೆಳೆದ ಉಚಿತವಾಗಿ ವಿತರಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಕಾಯಕ ಮಿತ್ರ ಮುಮತಾಜ್ ತಾಹೆರಾ, ಸಂಜೀವಿನಿ ಸ್ವಸಹಾಯ ಗುಂಪಿನ ಅಧ್ಯಕ್ಷೆ ಪರ್ವೀನ್ ಬೇಗಂ, ಮಂಜುಳ, ಪಾರ್ವತಿ, ಕಾವೇರಿ, ಜರೀನಾ ಇದ್ದರು.