
ಬೆಂಗಳೂರು, ಆ.೩- ರಾಜಧಾನಿ ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್ ನಲ್ಲಿ ನಾಳೆ ಸಂಜೆಯಿಂದ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಆರಂಭವಾಗುತ್ತಿದ್ದು, ರಾಜ್ಯ ಅಮೂಲ್ಯ ಸಂಪತ್ತಾದ ಮಲೆನಾಡಿನ ಪಶ್ಚಿಮ ಘಟ್ಟಗಳ ಘಮಲು ಧರೆಗಿಳಿದಿದೆ. ಮತ್ತೊಂದೆಡೆ, ೧೮ ಅಡಿ ಎತ್ತರದ ವಿಧಾನಸೌಧದ ಪುಷ್ಪ ಮಾದರಿಯ ಪ್ರತಿಕೃತಿ ಮೈದೆಳೆದಿದೆ. ಈ ಅಭೂತಪೂರ್ವ ದೃಶ್ಯ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರಲಿದೆ.
ಆಗಸ್ಟ್ ೧೫ವರೆಗೆ ನಡೆಯಲಿರುವ ಈ ಫಲಪುಷ್ಪ ಪ್ರದರ್ಶನದಲ್ಲಿ ಮಲೆನಾಡಿನ ಪಶ್ಚಿಮ ಘಟ್ಟಗಳೇ ಪ್ರಮುಖ ಆಕರ್ಷಣೆ. ಇಲ್ಲಿ ಸಸ್ಯ ಪ್ರಭೇದವನ್ನು ಹೊತ್ತು ತರಲಾಗಿದ್ದು, ಸಹ್ಯಾದ್ರಿಯ ೧೩೨ ಸಸ್ಯ ಪ್ರಭೇದಕ್ಕೆ ಸೇರುವ ೪೫೦ ಸಸಿಗಳನ್ನು ಇದೇ ಮೊದಲ ಬಾರಿಗೆ ನಡೆಸಲಾಗುತ್ತಿದೆ.
ಅಮೇರಿಕಾ, ಲಂಡನ್‌ನ ಕ್ಯೂ ಗಾರ್ಡನ್‌ನ ರಾಯಲ್ ಬಟಾನಿಕಲ್ ಸೊಸೈಟಿಯು ಆಯೋಜಿಸುವ ಚಲ್ಸಿ ಪ್ರದರ್ಶನಗಳನ್ನು ಹೊರತುಪಡಿಸಿದರೆ ಲಾಲ್‌ಬಾಗ್‌ನ ಫಲ ಪುಷ್ಪ ಪ್ರದರ್ಶನಗಳು ಜಾಗತಿಕವಾಗಿ ೩ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ.
ಅದರಂತೆ ಈಗ ೨೧೪ನೇ ಪ್ರದರ್ಶನವನ್ನು ಕಾಣುತ್ತಿರುವ ಲಾಲಾಬಾಗ್‌ನಲ್ಲಿ ೧೨ ದಿನಗಳ ಕಾಲ ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥ ಏರ್ಪಡಿಸಲಾಗಿದ್ದು, ಈ ಬಾರಿ ವಿಧಾನಸೌಧವೇ ಅನಾವರಣಗೊಂಡಿದೆ.
ಲಾಲ್‌ಬಾಗ್‌ನ ಗಾಜಿನಮನೆಯ ಕೇಂದ್ರಭಾಗದಲ್ಲಿ ೧೮ ಅಡಿ ಎತ್ತರದ ವಿಧಾನಸೌಧದ ಪುಷ್ಪ ಮಾದರಿಯ ಪ್ರತಿಕೃತಿಯನ್ನು ಕಬ್ಬಿಣ ಮೆಷ್ ಮೊದಲಾದ ವಸ್ತುಗಳನ್ನು ಬಳಸಿ ಕೆಂಪು, ಪೀಚ್, ಹಳದಿ, ರಸ್ಪ್, ಆರೆಂಜ್ ಮತ್ತು ಶ್ವೇತ ವರ್ಣದ ಡಚ್ ಗುಲಾಬಿ ಹೂಗಳು, ಪಿಂಚ್ಡ್ ಕೆಂಪು ಗುಲಾಬಿ ಶ್ವೇತ ವರ್ಣದ ಸೇವಂತಿಗೆ ಸೇರಿದಂತೆ ಬರೋಬ್ಬರಿ ಏಳು ಲಕ್ಷ ತಾಜಾ ಹೂವುಗಳನ್ನು ಬಳಸಿ ನಿರ್ಮಿಸಲಾಗಿದೆ.
ಅಲ್ಲದೆ ಗಾಜಿನಮನೆಯ ಪ್ರವೇಶದಲ್ಲಿ ಎಕ್ಸೋಟಿಕ್ ಆರ್ಕಿಡ್ಸ್, ಬರ್ಡ್ ಆಫ್ ಪ್ಯಾರಡೈಸ್, ಬ್ರೋಮಿಲಿಯಾಡ್ಸ್, ಆಂಥೂರಿಯಂ ಸೇರಿ ಹತ್ತಾರು ಬಗೆಯ ವಾರ್ಷಿಕ ಹೂಗಳು, ವಿವಿಧ ಪೊಲೀಸ್ ಜಾತಿಯ ಗಿಡಗಳನ್ನು ಬಳಸಿ ಇಂಡೋ-ಅಮೇರಿಕನ್ ಹೈಬ್ರಿಡ್ ಸೀಡ್ಸ್ ೨ ಕಂಪೆನಿಯು ಹೂ ಜೋಡಣೆ ಮತ್ತು ಕೆಂಗಲ್ ಹನುಮಂತಯ್ಯನವರ ಪುತ್ಥಳಿ ವಿನ್ಯಾಸ ಮಾಡಿದೆ. ಇನ್ನೂ ವಿಧಾನಸೌಧದ ಪುಪ್ಪ ಮಾದರಿಯ ಮುಂದೆ ರಾರಾಜಿಸಲಿರುವ ಕೆಂಗಲ್ ಹನುಮಂತಯ್ಯನವರ ೧೪ ಅಡಿ ಎತ್ತರದ ಬೃಹತ್ ಪ್ರತಿಮೆ ನೋಡುಗರ ಕಣ್ಮನ ಸೆಳೆಯಲಿದೆ.
ಗಾಜಿನಮನೆಯ ಕೇಂದ್ರಭಾಗದ ಬಲಬದಿಯಲ್ಲಿ ನಿರ್ಮಿಸಲಾಗಿರುವ ೧೭ ಅಡಿ ಸುತ್ತಳತೆ ಮತ್ತು ೨೪ ಅಡಿ ಎತ್ತರದ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಪುಷ್ಪ ಮಾದರಿಗೆ ಬಗೆ ಬಗೆಯ ಸೇವಂತಿಗೆ ಹೂಗಳನ್ನು ಬಳಸಿ ಮೆರುಗು ನೀಡಲಾಗಿದೆ.
೨೨೦೦ ಚದುರ ಅಡಿಯ ಕಣ್ಮನ ಸೆಳೆಯುವ ಮೆಗಾ ಯೊರೋಪಿಯನ್ ಫ್ಲೋರಲ್ ಕಾರ್ಪೆಟ್‌ನ ಅನಾವರಣ, ಗಾಜಿನಮನೆಯ ಕೇಂದ್ರ ಭಾಗದ ಹಿಂಬದಿಯ ಅಂಕಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿ ಕೆಂಗಲ್ ಹನುಮಂತಯ್ಯ ಸೇರಿದಂತೆ ೧೭ಕ್ಕೂ ಅಧಿಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.
ಕೋಲಾರ ಚಿನ್ನದ ಗಣಿಯ ರಾಷ್ಟ್ರೀಕರಣವನ್ನು ನೆನೆಯುವ ಕಲಾಕೃತಿ, ಹತ್ತು ಆಕರ್ಷಕ ಹೂವಿನ ಪಿರಮಿಡ್‌ಗಳ ತುದಿಯಲ್ಲಿ ಕೆಂಗಲ್ ಹನುಮಂತಯ್ಯನವರ ಚಿತ್ರ ಸಂಯೋಜನೆ, ಗಾಜಿನ ಮನೆಯ ಒಳಾವರಣದಲ್ಲಿ ಹನುಮಂತಯ್ಯನವರ ವಿಶೇಷ ಛಾಯಾಚಿತ್ರ ಮಾಹಿತಿ – ಪ್ರದರ್ಶನ, ಕಂಬಗಳಲ್ಲಿ ಅರಳುವ ಪುಷ್ಪ ಧೂಮಗಳು ಶೀತ ವಲಯದ ಹೂಗಳ ಪ್ರದರ್ಶನ ದ್ವಾರದಲ್ಲಿ ಅರಳುವ ಕೆಂಗಲ್ ಹನುಮಂತನ ಅವರ ಮುಖಭಾವ ಮತ್ತು ವಿಧಾನಸೌಧದ ಕಲಾಕೃತಿ, ಫರ್ನರಿಯ ಪ್ರದರ್ಶನ ಜನ ಮೆಚ್ಚುಗೆಗೆ ಪಾತ್ರವಾಗಲಿವೆ.
ತೋಟಗಾರಿಕೆ ಇಲಾಖೆಯು ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್‌ಆರ್ಟ್, ಜಾನೂರು ಒಣಹೂವಿನ ಜೋಡಣೆಯ ಕಲೆಗಳ ಸ್ಪರ್ಧೆಗಳ ಪ್ರದರ್ಶನವನ್ನು ನಡೆಸಲಿದೆ.
ಅಲ್ಲದೆ ಸಾರ್ವಜನಿಕರಲ್ಲಿ ಪರಿಸರ, ಗಿಡ-ಮರಗಳ ಬಗ್ಗೆ ಜಾಗೃತಿ ಮೂಡಿಸಲು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ. ಮಕ್ಕಳಿಗೆ ಪ್ರಬಂಧ ಹಾಗೂ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ವಿವಿಧ ಸಂಘ-ಸಂಸ್ಥೆ ಮತ್ತು ತರಬೇತಿ ಕೇಂದ್ರದ ಅಭ್ಯರ್ಥಿಗಳಿಗೆ ಹಣ್ಣು- ತರಕಾರಿ ಕೆತ್ತನೆ, ಹೂವಿನ ಜೋಡಣೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಶಾಲಾ ಮಕ್ಕಳಿಗೆ ಉಚಿತ..!
ಶಾಲಾ ಸಮವಸ್ತ್ರ ಮತ್ತು ಗುರುತಿನ ಚೀಟಿ ಧರಿಸಿ ಬರುವ ೧ರಿಂದ ೧೦ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರದರ್ಶನದ ಪೂರ್ಣ ಅವಧಿಯಲ್ಲಿ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.
ಹಾಗೇ, ಪ್ರದರ್ಶನಕ್ಕೆ ಎಲ್ಲಾ ನಾಲ್ಕು ದ್ವಾರಗಳಲ್ಲಿ ಸಾರ್ವಜನಿಕರಿಗೆ ಪ್ರವೇಶವಿರಲಿದ್ದು, ವಾರದ ದಿನಗಳಲ್ಲಿ ೭೦ ರೂ. ಮತ್ತು ರವಿವಾರ ಮತ್ತು ಸರಕಾರಿ ರಜಾ ದಿನಗಳಲ್ಲಿ ೮೦ ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ೧೨ ವರ್ಷದ ಕೆಳಗಿನ ಮಕ್ಕಳಿಗೆ ೩೦ ರೂ. ಪ್ರವೇಶ ಶುಲ್ಕವಿರಲಿದೆ.
ನಾಳೆ ಪ್ರದರ್ಶನ ಉದ್ಘಾಟನೆ..!
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ೨೧೪ನೇ ಪ್ರದರ್ಶನ ಇದಾಗಿದ್ದು, ನಾಳೆ ಸಂಜೆ ೬ಗಂಟೆಗೆ, ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್, ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಉದಯ್ ಬಿ.ಗರುಡಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ.