ಸಸಿ ನೆಟ್ಟು ಮಗಳ  ಹುಟ್ಟುಹಬ್ಬ ಆಚರಿಸಿದ ದಂಪತಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 22 :- ಹುಟ್ಟುಹಬ್ಬವೆಂದರೆ  ಹೆಚ್ಚಾಗಿ ಕೇಕ್ ಕತ್ತರಿಸಿ ಮೋಜು ಮಸ್ತಿ ಮಾಡಿ ಸಂಭ್ರಮಿಸುವವರೇ ಹೆಚ್ಚು ಆದರೆ ಇಲ್ಲೊಂದು ಕುಟುಂಬ ತನ್ನ ಐದು ವರ್ಷದ ಮಗಳ ಹುಟ್ಟುಹಬ್ಬವನ್ನು ಪ್ರತಿ ವರ್ಷ ಸಸಿ ನೆಡುವ ಮೂಲಕ ಆಚರಿಸುತ್ತಿರುವುದು  ವಿಶೇಷ ಎಂದು ಹೇಳಬಹುದಾಗಿದೆ.
ಕೂಡ್ಲಿಗಿ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಕಾನಹೊಸಹಳ್ಳಿ ಮಧುಸೂಧನ, ಹಾಗೂ ಅವರ ಪತ್ನಿ ಮಂಜುಳಾ  ತಮ್ಮ ಪುತ್ರಿ ಸಮಂತಾ ಅವರ 5ನೇ ವರ್ಷದ ಹುಟ್ಟುಹಬ್ಬವನ್ನು ಈ ಬಾರಿ ತಾಲೂಕಿನ ಸುಕ್ಷೇತ್ರದಲ್ಲಿ ಒಂದಾಗಿರುವ ಕಾನಾಮಡುಗು  ಶ್ರೀ ಶರಣಬಸವೇಶ್ವರ ದಾಸೋಹ ಮಠದ ಆವರಣದಲ್ಲಿ ಭಾನುವಾರ ಸಸಿಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಭಾಗಿಯಾಗಿದ್ದ  ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯರು ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯಂತೆ ಅನೇಕರು ಜನ್ಮದಿನ, ವಿವಾಹ ವಾರ್ಷಿಕೋತ್ಸವಕ್ಕೆ ಕೇಕ್ ಕತ್ತರಿಸುತ್ತಾರೆ. ಆದರೆ ಮಧುಸೂದನ ಕುಟುಂಬವು ಮಗಳ ಜನ್ಮದಿನಾಚರಣೆಯನ್ನು ಸಸಿನೆಡುವ ಮೂಲಕ ಆಚರಿಸಿ ಪ್ರತಿಯೊಬ್ಬರಿಗೆ ಪರಿಸರದ ಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ ಇದೊಂದು ಉತ್ತಮ ಕಾರ್ಯವಾಗಿದ್ದು ಮತ್ತೊಬ್ಬರಿಗೆ ಮಾದರಿಯಾಗುವ ಈ ಕಾರ್ಯಕ್ಕೆ ಶರಣಾರ್ಯರು ಶ್ಲಾಘಿಸಿದರು.  ಬೇವು, ನೇರಳೆ, ಶ್ರೀಗಂಧ ಸೇರಿ ನಾನಾ ಜಾತಿಯ ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕ ಹುಲಿಕೆರೆ ದಯಾನಂದ್ ಸಜ್ಜನ್ ಸೇರಿ ಅಧಿಕಾರಿ ದಂಪತಿ ಇದ್ದರು.
ಮಗಳು ಸುಮಂತಾ ಅವರ ಕಳೆದ 4 ವರ್ಷ ಆಚರಿಸಿಕೊಂಡ ಜನ್ಮದಿನದಂದು ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಕೊಪ್ಪಳ, ಪತ್ನಿಯ ಊರಾದ ಆನಗೋಡು ಬಳಿಯ ಗುಡಾಳು, ಕಳೆದ ಬಾರಿ ಕೂಡ್ಲಿಗಿಯಲ್ಲಿ ಸಸಿಗಳನ್ನು ನೆಡಲಾಗಿತ್ತು. ಮೊದಲ ವರ್ಷ ಕೊಪ್ಪಳದಲ್ಲಿ ನೆಟ್ಟಿದ್ದ ಸಸಿಗಳು ಈಗ ನಾಲ್ಕೈದು  ಅಡಿ ಎತ್ತರಕ್ಕೆ ಬೆಳೆದಿರುವುದು ನನಗೆ ಖುಷಿ ಕೊಟ್ಟಿದೆ.
– ಮಧುಸೂಧನ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ, ಕೂಡ್ಲಿಗಿ