ಸಸಿ ನೀಡಿ ಪರಿಸರ ಪ್ರೇಮ ಮೆರೆದ ನವ ಜೋಡಿ


ಅಳ್ನಾವರ,ಮೇ.3: ಮಲೆನಾಡಿನ ಸೆರಗಿನ ಅಳ್ನಾವರ ಪಟ್ಟಣ ಹಸಿರು ಪರಿಸರದಿಂದ ಕೂಡಿದೆ. ಇಂತಹ ಪರಿಸರದ ಮಹತ್ವ ಕಾಪಾಡಲು ಹೊಸ ಬಾಳಿಗೆ ಕಾಲಿಟ್ಟ ನವ ಜೋಡಿಗಳ ಮದುವೆ ಕಾರ್ಯಕ್ರಮದಲ್ಲಿ ಬಂದವರಿಗೆ ಸಸಿ ನೀಡುವ ನೂತನ ಪದ್ದತಿ ಅನುಸರಿಸುವ ಮೂಲಕ ಪರಿಸರ ಕಾಳಜಿ ಮೆರೆದರು.
ಮದುವೆಯಲ್ಲಿ ಕೋವಿಡ್ ನಿಯಮ ಪಾಲನೆ ಮಾಡಲಾಗಿತ್ತು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತಿದ್ದರು. ಸಾಲಾಗಿ ವೇದಿಕೆಗೆ ಬಂದು ನವ ಜೋಡಿಗೆ ಆಶೀರ್ವದಿಸಿದರು.
ಇಲ್ಲಿನ ಕ್ರೈಸ್ತ ಸಮಾಜದ ಈ ನವ ಜೋಡಿ ಸಮಾಜದ ಆಯ್ದ ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಹೊಸ ಬಾಳಿಗೆ ಕಾಲಿಟ್ಟರು. ಮದುವೆಗೆ ಆಗಮಿಸಿದ ಎಲ್ಲರಿಗೂ ಸಸಿ ನೀಡಿ ಇದನ್ನು ಹಚ್ಚಿ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ವಿನಂತಿಸಿದರು. ಕೋವಿಡ್ ಕಾಲ ಘಟ್ಟ ಇಂತಹ ವಿನೂತನ ಕಾರ್ಯಕ್ಕೆ ಸಾಕ್ಷಿಯಾಗಿತ್ತು.
ಕೋವಿಡ್ ನಿಯಮ ಪಾಲನೆ ಸರಿಯಾಗಿ ಪಾಲನೆ ಮಾಡಲಾಗಿದೆಯೊ ಎಂದು ಪರಿಶೀಲಿಸಲು ಆಗಮಿಸಿದ ತಹಶೀಲ್ದಾರ್ ಅಮರೇಶ ಪಮ್ಮಾರ, ಪಿ ಎಸ್ ಐ ಎಸ್.ಆರ್. ಕಣವಿ , ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ ಅವರು ಸರ್ಕರದ ಕೋವಿಡ್ ನಿಯಮ ಪಾಲನೆ ಸರಿಯಾಗಿ ಮಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ , ನವ ಜೋಡಿಗೆ ಶುಭಾಶಯ ಕೋರಿದರು. ಅಥಿತಿಗಳಿಗೆ ಕೂಡಾ ಸಸಿ ನೀಡಲಾಯಿತು.
ವರನ ತಾಯಿ ಪಿಲೋಮಿನಾ ಡಿಸೋಜಾ ಇಲ್ಲಿನ ಸೇಂಟ್ ತೆರೆಶಾ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಬಗ್ಗೆ ಇವರಿಗೆ ವಿಶೇಷ ಕಾಳಜಿ ಇದೆ. ಶಾಲೆಯಲ್ಲಿ ಸದಾ ,ಮಕ್ಕಳಿಗೆ ಪರಿಸರ, ಸಸಿ ನೆಡುವ ಹಾಗೂ ಗಿಡದ ಮಹತ್ವ ಕುರಿತು ತಿಳುವಳಿಕೆ ನೀಡುತ್ತಾರೆ. ಪ್ರತಿ ವರ್ಷ ಶಾಲೆಯಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪೀಲೋಮಿನಾ ಟಿಚರ್ ಮಾರ್ಗದರ್ಶನದಲ್ಲಿ ಪರಿಸರ ಮಹತ್ವ ಸಾರುವ ನಾಟಕ ಅಥವಾ ಡ್ಯಾನ್ಸ್ ಇರುವದು ಕಡ್ಡಾಯ. ಇದರ ಬಗ್ಗೆ ಅವರ ಶಿಷ್ಯ ವರ್ಗಕ್ಕೆ ಅರಿವೂ ಇದೆ. ಇದೆ ಪರಂಪರೆಯನ್ನು ಮುಂದುವೆರೆಸಿದ ಪೀಲಿಮೀನಾ ಟಿಚರ್ ತಮ್ಮ ಹಿರಿಯ ಪುತ್ರ ರುಶೇಲ್ ಅವನ ವಿವಾಹ ಕಾರ್ಯಕ್ರಮದಲ್ಲಿ ಕೂಡಾ ಪರಿಸರ ಮಮತೆ ತೋರಿದರು, ಮದುವೆ ಆಮತ್ರಣ ಪತ್ರದಲ್ಲಿ ಸಹ ಪರಿಸರ ಉಳಿಸಿ ಎಂಬ ಸಂದೇಶ ಹಾಕಲಾಗಿದೆ. ಈ ಕ್ರಮದಿಂದ ಪೀಲೊಮಿನಾ ಟಿಚರ್, ಸಾರ್ವಜನಿಕ ವಲಯದಲ್ಲಿ ಬೇಷ್ ಎನಿಸಿಕೊಂಡರು.
ಪಿಲೋಮಿನಾ ಮತ್ತು ಬಾಝಲ್ ಡಿಸೋಜಾ ಅವರ ಪುತ್ರ ರುಶೇಲ್ ಅವರ ಶುಭ ವಿವಾಹವು ಪಿಲೋಮಿನಾ ಸೆಬಸ್ಟಿನ್ ಮೆಂಡಿಸ್ ಅವರ ಪುತ್ರಿ ಅಲ್ಬಾಟಿನ್ ಅವರೊಂದಿಗೆ ಬಾನುವಾರ ನಡೆಯಿತು.
ಸಂತ್ ಅನ್ನಮ್ಮ ಚರ್ಚನ ಧರ್ಮಗುರು ಫಾದರ್. ಜೊಶೆಪ್ ರೋಡ್ರಿಗ್ಸ್, ಫಾ. ಜೋ ಡಿಸೋಜಾ, ಫಾ. ಕ್ಲೀಫರ್ಡ, ಶಾಲೆಟ್ ಬರಬೋಜಾ, ಲೂಸಿ ಕೋರಿಯಾ, ರುದ್ರೇಶ ಹಡಪದ, ಪುಂಡಲಿಕ ಪಾರದಿ, ರಾಜು ಕರ್ಲೇಕರ, ಉಮೇಶ ದೊಡ್ಡಮನಿ ಇದ್ದರು.