ಸಸಿಗಳನ್ನು ನೆಟ್ಟು, ಆಮ್ಲಜನಕ ಪಡೆಯಿರಿ

ಕಲಬುರಗಿ:ಜು.31:ಕೌಶಲ್ಯ ಅಭಿವೃಧ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಪ್ರಾಯೋಜಿತ ಸಂಸ್ಥೆಯಾದ ಜನ ಶಿಕ್ಷಣ ಸಂಸ್ಥಾನ ಗುಲಬರ್ಗಾ ಜಿಲ್ಲೆಯಾದ್ಯಂತ ಸತತವಾಗಿ 15 ದಿನ ಅಂದರೆ 15/07/2021 ರಿಂದ 31/07/2021 ರವರೆಗೆ ನಡೆಯುವ ಸ್ವಚ್ಛತಾ ಪಕವಾಡ ಕಾರ್ಯಕ್ರಮದ ಅಡಿಯಲ್ಲಿ ಸಸಿಗಳನ್ನು ನೆಡುವ ಮತ್ತು ಅದರ ಮಹತ್ವದ ಕುರಿತು ಅರಿವು ಕಾರ್ಯಕ್ರಮವನ್ನು ದಿನಾಂಕ: 30-07-2022 ರಂದು ನಿಂಬರ್ಗಾ ಗ್ರಾಮದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಕಲ್ಯಾಣ ರಾವ ಪಾಟೀಲ ರವರು ಇಂದಿನ ದಿನಗಳಲ್ಲಿ ಮರ-ಗಿಡಗಳನ್ನು ಕಡಿದು ಕಾಡುನಾಶ ಮಾಡುವ ವೇಗವನ್ನು ನೋಡಿದರೆ ನಮ್ಮ ಮಾನವ ಸಂಕುಲ ಮುಂದೊಂದು ದಿನ ನಮ್ಮ ಅಂತ್ಯವನ್ನು ನಾವೇ ಮಾಡಿಕೊಂಡಂತಾಗುತ್ತದೆ. ಆಧುನೀಕರಣದ ಹೆಸರಿನಲ್ಲಿ ನಮ್ಮ ಪರಿಸರವನ್ನು ನಾಶ ಮಾಡಹೊರಟ ನಾವು ಯಾವ ಆಧುನೀಕರಣ ಮಾಡುತ್ತಿದ್ದೇವೆ. ಪರಿಸರವೇ ಶುದ್ಧವಾಗಿರದೇ ಹೋದರೆ ಯಾವ ಆಧುನೀಕರಣ ಮಾಡಿದರೇನು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕರಾದ ಶ್ರೀ ಸುರೇಂದ್ರ ಪೋಲಿಸ್ ಪಾಟೀಲ ರವರು ಮಾತನಾಡುತ್ತಾ ನಾವು ಇಂದು ಒಂದು ಮರ ನೆಟ್ಟರೆ ಅದು ವರ್ಷಾನುಗಟ್ಟಲೆ ನಮಗೆ ಉಚಿತವಾಗಿ ಶುದ್ಧವಾದ ಆಮ್ಲಜನಕ ಕೊಡುತ್ತದೆ. ಆದರೇ ನಾವು ಮರಗಳನ್ನು ಬೆಳೆಸದೇ ಈಗಾಗಲೇ ಇದ್ದ ಮರಗಳನ್ನೂ ಸಹ ರಕ್ಷಣೆ ಮಾಡದೇ ಪರಿಸರದ ಬಗ್ಗೆ ಕಾಳಜಿ ವಹಿಸದೇ ನಿರ್ಲಕ್ಷ್ಯತನದಿಂದ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮಗ್ನರಾಗಿದ್ದೇವೆ. ಇದು ಹೀಗೆಯೇ ಮುಂದುವರಿದರೆ ನಾವೇಲ್ಲರೂ ಉಸಿರಾಡಲು ಗಾಳಿಯನ್ನು ಖರೀದಿಸಿ ಉಸಿರಾಡಬೇಕಾದ ಹೀನಾಯ ಸ್ಥಿತಿಯನ್ನು ತಲುಪುವುದರಲ್ಲಿ ಅನುಮಾನವೇ ಇಲ್ಲ. ಒಂದು ಮರ ಕನಿಷ್ಠ 2 ರಿಂದ 10 ಜನರಿಗೆ ಆಮ್ಲಜನಕವನ್ನು ಪೂರೈಸುವ ಶಕ್ತಿ ಹೊಂದಿದೆ. ಹೀಗಾಗಿ ಇವತ್ತಿನಿಂದಲೇ ನಾವು ತಲಾ ಒಂದು ಮರಗಳನ್ನು ಬೆಳೆಸೋಣ ಎಂದು ಕರೆ ನೀಡಿದರು.

ಅತಿಥಿಗಳು ಸಾಂಕೇತಿಕವಾಗಿ ಹೊರ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಜನರಲ್ಲಿ ನಾವೂ ಸಹ ಮರ-ಗಿಡಗಳನ್ನು ಬೆಳೆಸಬೇಕು ಎಂಬ ಭಾವನೆಯನ್ನು ಮೂಡಿಸಿದರು.

ಕಾರ್ಯಕ್ರಮದಲ್ಲಿ ಬಸವರಾಜ ಧಾಬಾ, ಗುಂಡುರಾವ ಬಿರಾದಾರ, ಸಿದ್ದಣಗೌಡ ಬಿರಾದಾರ, ಶ್ರೀದೇವಿ, ಪ್ರೀತಿ, ಸುನೀತಾ ಜವಳಿ, ಗಿರೀಶ ಪಾಟೀಲ, ಅಮರ ಹಾಗೂ ಇತರರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಪಾರ್ವತಿ ಹಿರೇಮಠ ನಿರೂಪಿಸಿ ವಂದಿಸಿದರು.