ಸಶಸ್ತ್ರ ಪೊಲೀಸ್ ಕಾನ್ಸ್‍ಸ್ಟೇಬಲ್ ಹುದ್ದೆಗಳಿಗೆ ಲಿಖಿತಪರೀಕ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಕಲಬುರಗಿ,ಸೆ.07:ಸಶಸ್ತ್ರ ಪೊಲೀಸ್ ಕಾನ್ಸ್‍ಸ್ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆಯು ಇದೇ ಸೆಪ್ಟೆಂಬರ್ 10 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಕಲಬುರಗಿ ನಗರದ ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ದಂಡಾಧಿಕಾರಿಗಳಾದ ಆರ್. ಚೇತನ್ ಅವರು ತಿಳಿಸಿದ್ದಾರೆ.

ಈ ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲು 200 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

ಈ ಪರೀಕ್ಷೆಯು ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಸಲು ಅನುಕೂಲವಾಗುವಂತೆ ಈ ಪರೀಕ್ಷಾ ಕೇಂದ್ರಗಳಲ್ಲಿ ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಂಬಂಧಪಟ್ಟ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗಳು ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್, ಬ್ಲ್ಯೂಟೂತ್ ಹಾಗೂ ವೈರ್‍ಲೆಸ್ ಸೆಟ್‍ಗಳು ಸೇರಿದಂತೆ ಮತ್ತಿತರ ಯಾವುದೇ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಅದೇ ರೀತಿ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯ 200 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಿರಾಕ್ಸ್ ಅಂಗಡಿಗಳನ್ನು ಸಹ ಮುಚ್ಚುವಂತೆಯೂ ಅವರು ಆದೇಶಿಸಿದ್ದಾರೆ.

ಮೇಲ್ಕಂಡ ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲೂ 5 ಅಥವಾ 5 ಕ್ಕಿಂತ ಹೆಚ್ಚು ಜನರು ಗುಂಪು-ಗುಂಪಾಗಿ ಸೇರುವುದನ್ನು ಹಾಗೂ ಮೆರವಣಿಗೆ ಹಾಗೂ ಸಭೆ-ಸಮಾರಂಭ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.