ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ


ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಡಿಸೆಂಬರ್ 7 ರಂದು ದೇಶದಾದ್ಯಂತ ಆಚರಿಸಲಾಗುತ್ತದೆ. ಭಾರತೀಯ ಸೈನಿಕರ ಕಲ್ಯಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಮೂಲಕ ವಿಭಿನ್ನವಾಗಿ ಈ ದಿನವನ್ನು 1949 ರಿಂದಲೂ ಆಚರಿಸುತ್ತ ಬರಲಾಗುತ್ತಿದೆ. ಪ್ರತಿವರ್ಷವೂ ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಎಲ್ಲಾ ಸೈನಿಕರಿಗೂ ಗೌರವ ನೀಡುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಸ್ವಾತಂತ್ರ್ಯಾನಂತರ ಭಾರತಕ್ಕೆ, ತನ್ನ ದೇಶವನ್ನು ಕಾಯುವ ಸೈನಿಕರ ಶ್ರೇಯೋಭಿವೃದ್ಧಿಗಾಗಿ ಏನನ್ನಾದರೂ ಮಾಡಬೇಕು ಎಂಬ ಯೋಚನೆ ಬಂತು. ಇದರ ಫಲವಾಗಿ ಪುಟ್ಟ ಧ್ವಜವನ್ನು ಸಾರ್ವಜನಿಕರಿಗೆ ನೀಡಿ, ಅವರ ಮೂಲಕ ಕೈಲಾದಷ್ಟು ದೇಣಿಗೆ ಪಡೆದು, ಅದನ್ನು ಸೇನೆಗೆ ಅರ್ಪಿಸುವ ಈ ಮಹೋನ್ನತ ಕೆಲಸ ಆರಂಭವಾಯಿತು.

ಈ ದೇಣಿಗೆಯಿಂದ ಸಂಗ್ರಹವಾದ ಹಣವನ್ನು ಸೈನಿಕರು ಮತ್ತು ಅವರ ಕುಟುಂಬದ ಶ್ರೇಯೋಭಿವೃದ್ಧಿಗೆ, ಯುದ್ಧದ ಸಮಯದ ಅಗತ್ಯಕ್ಕೆ, ಮಾಜಿ ಸೈನಿಕರು ಮತ್ತವರ ಕುಟುಂಬದ ಕಲ್ಯಾಣಕ್ಕೆ ಬಳಸಲಾಗುತ್ತದೆ.ಭಾರತೀಯ ವಾಯುಸೇನೆ, ಭೂಸೇನೆ ಹಾಗೂ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಗೌರವ ಅರ್ಪಿಸುವ ಉದ್ದೇಶ ಕೂಡ ಆಚರಣೆಯ ಹಿಂದಿದೆ. ಗಡಿ ಭಾಗದಲ್ಲಿ ಸೈನಿಕರು ತಮ್ಮ ಪ್ರಾಣ ಒತ್ತೆ ಇಟ್ಟು ದೇಶಕ್ಕಾಗಿ ಹೋರಾಡುತ್ತಾರೆ. ಹೀಗಾಗಿ, ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎನ್ನುವ ಉದ್ದೇಶದಿಂದ ಧ್ವಜ ದಿನಾಚರಣೆ ಮಾಡಲಾಗುತ್ತಿದೆ.

ಅದು 1949ರ ಸಮಯ. ಆಗತಾನೇ ಭಾರತಕ್ಕೆ ಸ್ವಾತಂತ್ರ್ಯ ಬಂದು ಎರಡು ವರ್ಷಗಳು ಕಳೆದಿದ್ದವು. ದೇಶದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ದೊಡ್ಡ ಸವಾಲಾಗಿತ್ತು. ಜೊತೆಗೆ ಸೈನಿಕರ ಶ್ರೇಯೋಭಿವೃದ್ಧಿ ಮಾಡುವುದು ಕೂಡ ಸರ್ಕಾರದ ಪ್ರಮುಖ ಜವಾಬ್ದಾರಿಗಳಲ್ಲೊಂದಾಗಿತ್ತು. ಸೈನಿಕರಿಗಾಗಿ ಏನನ್ನಾದರೂ ಮಾಡಬೇಕು ಎನ್ನುವ ಹಂಬಲ ಸರ್ಕಾರಕ್ಕೆ ಹುಟ್ಟಿಕೊಂಡಿತ್ತು. ಆಗ ಡಿಸೆಂಬರ್​ 7ಅನ್ನು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನಾಗಿ ಆಚರಣೆ ಮಾಡಲು ನಿರ್ಧರಿಸಲಾಯಿತು. ಅಂತೆಯೇ ಪ್ರತಿವರ್ಷ ಈ ದಿನವನ್ನು ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಪುಟ್ಟ ಧ್ವಜವನ್ನು ಜನರಿಗೆ ನೀಡಿ, ಅವರು ಕೊಡುವಷ್ಟು ದೇಣಿಗೆ ಪಡೆಯಲಾಗುತ್ತದೆ. ಹೀಗೆ ಸಂಗ್ರಹಿಸಿದ ಹಣವನ್ನು ಸೈನಿಕರು ಹಾಗೂ ಅವರ ಕುಟುಂಬದ ಶ್ರೇಯೋಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ.

ವರ್ಷದಿಂದ ವರ್ಷಕ್ಕೆ ಸಶಸ್ತ್ರ ಪಡೆಗಳ ಧ್ವಜ ದಿನದ ನಿಧಿಗೆ ಹರಿದು ಬರುತ್ತಿರುವ ಹಣದ ಪ್ರಮಾಣ ಹೆಚ್ಚುತ್ತಲೇ ಇದೆ. 2019-20ರ ಅವಧಿಯಲ್ಲಿ ಈ ನಿಧಿಗೆ ಬರೋಬ್ಬರಿ ₹ 47 ಕೋಟಿ ಬಂದಿತ್ತು. ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಆಚರಣೆಯ ಹಿಂದೆ ನಾನಾ ಕಾರಣಗಳಿವೆ. ಸೈನಿಕರಿಗೆ ಗೌರವ ಸಲ್ಲಿಕೆ ಮಾಡುವುದು ಈ ದಿನದ ಆಚರಣೆಯ ಮೂಲ ಉದ್ದೇಶ. ಇದರ ಜೊತೆಗೆ, ಯುದ್ಧದಲ್ಲಿ ಗಾಯಗೊಂಡವರಿಗೆ ಪುನರ್ವಸತಿ, ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಕಲ್ಯಾಣ, ನಿವೃತ್ತ ಸೈನಿಕರು ಮತ್ತು ಅವರ ಕುಟುಂಬಗಳ ಪುನರ್ವಸತಿ ಮತ್ತು ಕಲ್ಯಾಣ ಈ ಆಚರಣೆಯ ಉದ್ದೇಶಗಳಲ್ಲೊಂದು.

ಟ್ವಿಟ್ಟರ್ ನಲ್ಲೂ The Armed Forces Flag Day ಅಥವಾ Flag Day ಟ್ರೆಂಡಿಂಗ್ ಆಗಿದ್ದು, ಹಲವರು ಸೈನಿಕರ ಶೌರ್ಯ, ತ್ಯಾಗವನ್ನು ಈ ಮೂಲಕ ನೆನಪಿಸಿಕೊಂಡಿದ್ದಾರೆ.