
ಕಲಬುರಗಿ,ಜು.20: ನಗರದ ಸೂಪರ್ ಮಾರ್ಕೆಟ್ನ ಹೈದ್ರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿಯ ಸಭಾಂಗಣದಲ್ಲಿ ಜುಲೈ 24ರಂದು ಬೆಳಿಗ್ಗೆ 10-30ಕ್ಕೆ ಸವಿತಾ ಸಮಾಜದ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಸವಿತಾ ಸಮಾಜದ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗಣೇಶ್ ಪಿ. ಚಿನ್ನಾಕಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಎಸ್ಎಲ್ಸಿ ಮತ್ತು ಪಿಯುಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಗುವುದು ಎಂದರು.
ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ನೆರವೇರಿಸುವರು. ದಿವ್ಯ ಸಾನಿಧ್ಯವನ್ನು ಕೊಂಚೂರಿನ ಸವಿತಾ ಪೀಠ ಸಂಸ್ಥಾನ ಮಠದ ಸವಿತಾನಂದ್ ಮಹಾಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀಮತಿ ಇಶಾ ಪಂತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಗಮಿಸುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ್ ಅಗಸರ್ ಅವರು ಘನ ಉಪಸ್ಥಿತಿ ಇರುವರು ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಅಜಯಕುಮಾರ್ ಎ. ದಾಮೋದರ್ ಗಿಲ್ಡಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಡಾ. ನಾಗಪ್ಪ ಟಿ. ಗೋಗಿ, ಅಂಬರೀಷ್ ಗಂಗಾಧರ್ ಸುರಪುರ, ಸುಭಾಷ್ ಬಾದಾಮಿ, ಆನಂದ್ ವಾರಿಕ್, ರಾಜೇಂದ್ರ ಅಷ್ಟಗಿಕರ್ ಅವರು ಆಗಮಿಸುವರು ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಎಸ್ಎಸ್ಎಲ್ಸಿಯ 40, ಪಿಯುಸಿಯ 15, ಪದವಿಯ 15, ಸ್ನಾತಕೋತ್ತರ ಕೇಂದ್ರದ ಮೂವರು, ಎಂಬಿಬಿಎಸ್ನ ಇಬ್ಬರು, ಬಿಎಚ್ಎಂಎಸ್ನ ಇಬ್ಬರು, ಬಿಎಎಂಎಸ್ನ ಇಬ್ಬರು, ಪಶು ವೈದ್ಯಕೀಯದಲ್ಲಿನ ಓರ್ವ ವಿದ್ಯಾರ್ಥಿ ಸೇರಿದಂತೆ ಒಟ್ಟು 85 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಭೀಮಣ್ಣ ದೇವದುರ್ಗ, ಮಹೇಶ್ ಉಜ್ಜಲೀಕರ್, ಅನೀಲ್ ಹಜ್ಜರಗಿ ಮುಂತಾದವರು ಉಪಸ್ಥಿತರಿದ್ದರು.