ಸವಿತಾ ಸಮಾಜದಿಂದ ಧ್ವನಂತರಿ ಜಯಂತ್ಯೋತ್ಸವ

ಬಳ್ಳಾರಿ, ನ.14: ಬಳ್ಳಾರಿ ಸವಿತಾ ಸಮಾಜದಿಂದ ನಗರದ ಸ್ನೇಹ ಸಂಪುಟದಲ್ಲಿ ಆಯುರ್ವೇದ ಮಹರ್ಷಿ ಧ್ವನಂತರಿ ಜಯಂತ್ಯೋತ್ಸವವನ್ನು ನಿನ್ನೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಧನ್ವಂತರಿ ಎಂದರೆ ಹಿಂದೂ ಸಂಪ್ರದಾಯದಲ್ಲಿ ವಿಷ್ಣುವಿನ ಅವತಾರ. ವೇದ ಹಾಗೂ ಪುರಾಣಗಳಲ್ಲಿ ದೇವತೆಗಳ ವೈದ್ಯನೆಂದು ಧನ್ವಂತರಿಯ ಉಲ್ಲೇಖವಿದೆ. ಆಯುರ್ವೇದದ ದೇವತೆ ಕೂಡ ಧನ್ವಂತರಿ. ಹಿಂದೂ ಸಂಪ್ರದಾಯದಲ್ಲಿ ಆಯುರಾರೋಗ್ಯ ಬಯಸುವವರು ಧನ್ವಂತರಿಯ ಕುರಿತು ಪ್ರಾರ್ಥನೆ ಮಾಡುವುದು ಸಾಮಾನ್ಯ ಎಂದರು.
ಧನ್ವಂತರಿ ಭಾರತದ ಮೊದಲ ವೈದ್ಯನೆಂಬ ಪ್ರತೀತಿ ಹಾಗು ನಂಬಿಕೆ ಇದೆ. ವೈದಿಕ ಸಂಪ್ರದಾಯದ ಪ್ರಕಾರ ಧನ್ವಂತರಿ ಆಯುರ್ವೇದದ ಹರಿಕಾರ. ಹಿಂದೂ ಸಂಪ್ರದಾಯದಲ್ಲಿ ಹಲವು ಸಸ್ಯಗಳ, ಗಿಡಮೂಲಿಕೆಗಳ ಪಾರಿಸರಿಕ ಬಳಕೆಯಿಂದ ಔಷಧ ತಯಾರಿಸಿದ ಗೌರವ ಧನ್ವಂತರಿಗೆ ಸಲ್ಲುತ್ತದೆ ಎಂದು ವಿವರಿಸಿದರು.
ಕ್ಷೀರ ಸಮುದ್ರ ಮಥನ ಕಾಲದಲ್ಲಿ ದಿವ್ಯ ಗಂಧಾನುಲೇಪಿತನಾಗಿ ಅಮೃತ ಕಲಶ ಕೈಯಲ್ಲಿ ಹಿಡಿದು ಮಹಾವಿಷ್ಣು ಧನ್ವಂತರಿಯ ಅವತಾರ ತಾಳಿದನು ಎಂದು ಪುರಾಣಗಳಲ್ಲಿ ವರ್ಣಿತವಾಗಿದೆ. ದೇವತೆಗಳು ರಾಕ್ಷಸರೊಂದಿಗೆ ಹೋರಾಡುವ ಸಂದರ್ಭಗಳಲ್ಲಿ ಗುಣಪಡಿಸಲಾರದ ನೋವು ವ್ಯಾಧಿಗಳಿಗೆ ತುತ್ತಾಗುವುದನ್ನು ಕಂಡು ವೈದ್ಯನಾಗಿ ಚಿಕಿತ್ಸೆ ನೀಡಲು ಧನ್ವಂತರಿ ರೂಪಧಾರಿಯಾಗಿ ವಿಷ್ಣು ಅವತರಿಸಿದನೆಂದು ನಂಬಲಾಗಿದೆ ಧನ್ವಂತರಿ ಎಂದರೆ ಆಂಗ್ಲ ಭಾಷೆಯಲ್ಲಿ ಸರ್ಜನ್ ಎಂದು, ಪಾಪ ವಿಮುಕ್ತಿ ಎಂಬುದು ಧನ್ವಂತರಿ ಪದದ ನಿಷ್ಪತ್ತಿಯಾಗಿದೆ ಎಂದರು.
ಧನ್ವಂತರಿಯನ್ನು ನಿತ್ಯ ಪ್ರಾರ್ಥಿಸಿ ಕಾರ್ಯ ಆರಂಭಿಸಿದರೆ ದಿನವಿಡೀ ಚೈತನ್ಯಪೂರ್ಣತೆ ಉಳಿಯುತ್ತದೆ ಎನ್ನಲಾಗಿದೆ. ಧನ್ವಂತರಿ ಸುಪ್ರಭಾತ, ಧನ್ವಂತರಿ ಪ್ರಪತ್ತಿ, ಧನ್ವಂತರಿ ಸ್ಮೃತಿಗಳಲ್ಲಿ ಧನ್ವಂತರಿ ದೇವರ ವಿಶೇಷತೆಯನ್ನು ಬಣ್ಣಿಸಲಾಯಿತು ಎಂದು ತಿಳಿಸಿದರು. ರಾಜ್ಯ ಸವಿತಾ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್.ತಿಪ್ಪಣ್ಣ, ಮುಖಂಡರಾದ ಶರಣಪ್ಪ, ಜಿ.ನಾಗೇಂದ್ರ, ರಾಕೇಶ್, ನವೀನ್ ಪರ್ಲಾ, ಆರ್.ಶೇಖಣ್ಣ, ಸಣ್ಣ ತಿಮ್ಮಪ್ಪ, ಮಾರುತಿ, ರಮೇಶ್, ವೆಂಕಟೇಶ್, ವೆಂಕಟಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.