ಸವಿತಾ ಸಮಾಜಕ್ಕೆ ರಾಜ್ಯಸಭಾ ಸ್ಥಾನ ನೀಡಿ

ಬಳ್ಳಾರಿ, ನ.5: ಸವಿತಾ ಸಮಾಜದ ಹಲವಾರು ಬೇಡಿಕೆಗಳ ಈಡೇರಿಕೆಗೆ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ 16 ಜಿಲ್ಲೆಗಳ ಮುಖಂಡರ ನೇತೃತ್ವದಲ್ಲಿ ಹೊಸಪೇಟೆಯ ಪ್ರಿಯದರ್ಶಿನಿ ಪ್ರೈಡ್ ಹೋಟೆಲ್‍ನ ಸಭಾ ಭವನದಲ್ಲಿ ಸವಿತಾ ಸಮಾಜದ ಮುಖಂಡರ ಸಭೆ ನಡೆಯಿತು. ಸಭೆಯ ಸಾನಿಧ್ಯವನ್ನು ಸವಿತಾ ಪೀಠದ ಪೀಠಾಧ್ಯಕ್ಷ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ವಹಿಸಿದ್ದರು.
ಸಭೆಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಸವಿತಾ ಸಮಾಜದ ಅರ್ಹ ವ್ಯಕ್ತಿಯನ್ನೇ ಪರಿಗಣಿಸಬೇಕು. ಆ ಮೂಲಕ ಅನೇಕ ವರ್ಷಗಳ ನಂತರ ಸವಿತಾ ಸಮಾಜಕ್ಕೆ ದೊರೆತಿದ್ದ ಮಾನ್ಯತೆಯನ್ನು ಪುನಃ ನೀಡುವ ಮೂಲಕ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಯಿತು.
ಸವಿತಾ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂದು ಒತ್ತಾಯಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡಿ, ಮುಂದಿನ ಹೋರಾಟವಾಗಿ ಡಿಸೆಂಬರ್ ಕೊನೆಯಲ್ಲಿ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಬೆಂಗಳೂರಿಗೆ ವಿಧಾನಸೌಧದವರೆಗೆ ಪಾದಯಾತ್ರೆ ಮಾಡುವುದಾಗಿ, ಇದಕ್ಕೆ ಸವಿತಾ ಪೀಠದ ಧರ್ಮಾಧಿಕಾರಿ ಶ್ರೀಧರಾನಂದ ಸ್ವಾಮಿಗಳು ನೇತೃತ್ವ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸರ್ಕಾರ ಸ್ಥಾಪಿಸಿರುವ ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ ಶೀಘ್ರದಲ್ಲೇ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ನೇಮಕ ಮಾಡಿ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಅಲ್ಲದೇ ಕೊಂಚೂರಿನ ಸವಿತಾ ಪೀಠದ ಮಠ ನಿರ್ಮಾಣ ಕಾರ್ಯಕ್ಕೆ ಮಠ ಮಾನ್ಯಗಳಿಗೆ ನೀಡುವ ಅನುದಾನ ನೀಡುವ ಮೂಲಕ ಸವಿತಾ ಪೀಠದ ಅಭಿವೃದ್ಧಿಗೆ ನೆರವಾಗಬೇಕೆಂದು ಸರ್ಕಾರಕ್ಕೆ ಒತ್ತಾಯಪೂರ್ವಕ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಹೊಸಪೇಟೆ ಮಾಜಿ ನಗರಸಭಾ ಸದಸ್ಯ ರೂಪೇಶ್ ಕುಮಾರ್, ಸವಿತಾ ಪೀಠದ ಪ್ರಧಾನ ಕಾರ್ಯದರ್ಶಿ ಶರಣಪ್ಪ ಬಳ್ಳಾರಿ, ಕರ್ನಾಟಕ ರಾಜ್ಯ ಸವಿತಾ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯ ಜ್ಯೋತಿ ಕುಮಾರ್, ಮುಖಂಡರಾದ ನಾಗರಾಜ ಗಸ್ತಿ, ಭೋಜರಾಜ, ಅಪ್ಪಣ್ಣ ಚಿನ್ನಕಾರ್, ಪರಶುರಾಮ ನಸಳವಾಯಿ, ಸುಭಾಷ್ ಬಾದಾಮಿ, ಶ್ರೀನಿವಾಸ್, ಅಮರೇಶ್ ಸಿಂದನೂರ್ ಸೇರಿದಂತೆ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ 16 ಜಿಲ್ಲೆಗಳ ಜಿಲ್ಲಾಧ್ಯಕ್ಷಗಳು ಮತ್ತು ಜಿಲ್ಲಾ ಪ್ರತಿನಿಧಿಗಳು ಹಾಗೂ ತಾಲೂಕು ಅಧ್ಯಕ್ಷರುಗಳು ಉಪಸ್ಥಿತರಿದ್ದರು.