ಸವಿತಾ ಅಭಿವೃದ್ಧಿ ನಿಗಮ; ವಾರಿಕ್ ನೇಮಕಕ್ಕೆ ಆಗ್ರಹ

ಕಲಬುರಗಿ,ಫೆ.6:ರಾಜ್ಯ ಸವಿತಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಸವಿತಾ ಸಮಾಜದ ಯುವ ಮುಖಂಡ ಆನಂದ ವಾರಿಕ್ ಅವರನ್ನು ನೇಮಕ ಮಾಡಬೇಕೆಂದು ಜಿಲ್ಲಾ ಸವಿತಾ ಸಮಾಜ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಕೆರಿಅಂಬಲಗಾ ಒತ್ತಾಯಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸವಿತಾ ಸಮಾಜದ ವಿಭಾಗೀಯ ಕಾರ್ಯದರ್ಶಿಯಾಗಿ, ಜಿಲ್ಲಾ ಸವಿತಾ ಸಮಾಜದ ಸಕ್ರಿಯ ಜಿಲ್ಲಾಧ್ಯಕ್ಷರಾಗಿ, ಕಮಲಾಪುರ ತಾಲೂಕು ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಆನಂದ ವಾರಿಕ್ ಅವರನ್ನು ಸವಿತಾ ಅಭಿವೃದ್ಧಿ ನಿಗಮಕ್ಕೆ ನೇಮಕ ಮಾಡುವುದರಿಂದ ಸಮಾಜದ ಜನರಿಗೆ ಸರಕಾರದ ಸವಲತ್ತುಗಳು ಲಭಿಸಲು ಅನುಕೂಲವಾಗುತ್ತದೆ ಎಂದರು.
ಈಗಾಗಲೇ ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಮತ್ತು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ, ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಈ ನಿಟ್ಟಿನಲ್ಲಿ ಸಕಾರಾತ್ಮಕ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸಮಾಜದ ಮುಖಂಡರಾದ ಮಹೇಶ್ ಪಾಣೆಗಾಂವ್, ನರಸಿಂಹಲು ಆಡಕಿ, ಭೋಜರಾಜ ಕುಲಕುಂದಾ, ವಿದ್ಯಾಸಾಗರ ಹಾಬಾಳ, ಅನಿಲ್ ಕುಮಾರ್, ಅಂಬರೀಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.