ಸವಾಲು ಎದುರಿಸಲು ಸರಕಾರ ವಿಫಲ: ಸರಡಗಿ ಆಕ್ರೋಶ

ಕಲಬುರಗಿ:ಮೇ.4: ಕೊರೊನಾದಿಂದ ರಾಜ್ಯದಲ್ಲಿ ಏಕಾಏಕಿ ಎದುರಾಗಿರುವ ಸಂಕಷ್ಟ ಮತ್ತು ಸವಾಲುಗಳನ್ನು ಎದುರಿಸಲು ಯಡಿಯೂರಪ್ಪ ನವರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಸರಡಗಿ ಆರೋಪಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಕೋವಿಡ್ ಲಾಕ್ ಡೌನ್ ನಿಂದ ಕಾರ್ಮಿಕರು,ರೈತರು, ಉದ್ಯೋಗಿಗಳು, ದಿನಗೂಲಿ ನೌಕರರು ತೀವ್ರ ಸಂಕಷ್ಟಕ್ಕೊಳಗಾಗಿ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೊರೊನಾ ಹತೋಟಿಗೆ ತರುವ ನೆಪದಲ್ಲಿ ತೀರಾ ಕೆಳಸ್ಥರದ ಜನರ ಜೀವನ ಅಸ್ತವ್ಯಸ್ತವಾಗಿರುವುದನ್ನು ಸರಕಾರ ಪರಿಗಣನೆ ಮಾಡಿ ಅವರಿಗೆ ಸಹಾಯವಾಗುವಂತಹ ಸೂಕ್ತ ಪ್ಯಾಕೇಜನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡಲೇ ಘೋಷಣೆ ಮಾಡಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಸರಕಾರಕ್ಕೆ ಮನವಿ ಮಾಡಿದರು.

ಆಹಾರದ ಅಭಾವ ತಪ್ಪಿಸಲು ಪ್ರತಿ ತಾಲೂಕಿನಲ್ಲಿ ಆಹಾರ ಕೇಂದ್ರಗಳನ್ನು ತೆರೆಯಬೇಕು.ಈ ಮೊದಲು ಪಡಿತರಿಗೆ ನೀಡುತ್ತಿದ್ದ 15 ಕೆ.ಜಿ. ಅಕ್ಕಿಯನ್ನು ನೀಡಬೇಕು. ಪ್ರತಿಯೊಬ್ಬರಿಗೂ ಉಚಿತ ಕೊರೊನಾ ಲಸಿಕೆಯನ್ನು ನೀಡಬೇಕು. ಆಂದ್ರಪ್ರದೇಶದ ಮಾದರಿಯಲ್ಲಿ ಕೋವಿಡ್ ನಲ್ಲಿ ನರಳುತ್ತಿರುವ ರೋಗಿಗಳಿಗೆ ಎಲ್ಲಾ ಚಿಕಿತ್ಸೆ ಉಚಿತವಾಗಿ ನೀಡಬೇಕು. ಹಾಗೂ ರೈತರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿ ರೈತರ ಕೈ ಬಲಪಡಿಸಬೇಕೆಂದು ಒತ್ತಾಯಿಸಿದರು.