ಸವದತ್ತಿ ಹೈಟೆಕ್ ಬಸ್ ನಿಲ್ದಾಣಕ್ಕೆ ಶಂಕು ಸ್ಥಾಪನೆ

ಸವದತ್ತಿ,ಅ28- ಸಾರಿಗೆ ಸಂಸ್ಥೆ ಎಷ್ಟೆ ಸಂಕಷ್ಟದಲ್ಲಿದ್ದರೂ ಸಹಿತ ಸಾರ್ವಜನಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆಯನ್ನು ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಕೋವಿಡ್-19ರ ಹಿನ್ನೆಲೆಯಲ್ಲಿ ಆಗಿರುವಂತ ಲಾಕ್‍ಡೌನ ಸಮಯದಿಂದ ಇಲ್ಲಿಯವರೆಗೆ ರಾಜ್ಯದಲ್ಲಿನ ನಾಲ್ಕು ಸಾರಿಗೆ ನಿಗಮಗಳು ಸಂಪೂರ್ಣ ಹಾನಿಯಲ್ಲಿವೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದಲ್ಲಿ 4 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುತ್ತಿರುವ ಹೈಟೆಕ್ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ನಂತರ ಮಾಮನಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಸರಕಾರವು ಸಾರಿಗೆ ನೌಕರರ ಸಂಕಷ್ಟಕ್ಕೆ ಸ್ಪಂಧಿಸುತ್ತ ಬಂದಿದ್ದು, ಲಾಕ್‍ಡೌನದಲ್ಲಿ ಆಗಿರುವ ತೊಂದರೆ ಸಾರಿಗೆ ನೌಕರರ 6 ತಿಂಗಳ ಸಂಬಳವನ್ನು ಸರಕಾರವು ಭರಿಸಿರುವುದು ಸ್ವಾಗತಾರ್ಹ ಎಂದರು. ಮುಂದಿನ ಜನೆವರಿಯವರೆಗೆ ಸರಕಾರ ಸಾರಿಗೆ ನೌಕರರ ಸಂಬಳ ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿಸಿರುವದಾಗಿ ಹೇಳಿದರು. ಬಡವರ ಮತ್ತು ಮದ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಲು ಸಾರಿಗೆ ಸಂಸ್ಥೆ ನಷ್ಟ ಅನುಭವಿಸಿದರು 2014ರಿಂದ ಇಲ್ಲಿಯವರೆಗೆ ಪ್ರಯಾಣ ದರದಲ್ಲಿ ವ್ಯತ್ಯಾಸವನ್ನು ಮಾಡಿಲ್ಲ. ಇತ್ತೀಚಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯಲ್ಲಿ ಜನ ಸಂಚಾರ ಕಡಿಮೆಯಾಗುತ್ತಿದ್ದು, ಬರುವಂತ ಆದಾಯದಲ್ಲಿ ಡಿಸೈಲ್‍ಗೆ ಹಣ ಸರಿದೂಗುತ್ತಿಲ್ಲ ಎಂದರು.
ಸಾರಿಗೆ ಸಂಸ್ಥೆ ಇಂದು 3ಸಾವಿರ ಕೋಟಿ ರೂ.ಗಳ ಹಾನಿಯಲ್ಲಿದ್ದು, ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆಯಿಂದ ನೀಡುವ ಬಸ್ ಪಾಸ್ ಸೌಲಭ್ಯತೆಯ 2960 ಕೋಟಿ ರೂ.ಗಳನ್ನು ಸರಕಾರವು ಸಂಸ್ಥೆಗೆ ಬರಬೇಕಿದೆ ಎಂದರು.
ಸೋಲಾರ ಅಳವಡಿಕೆಯ ಆಧುನಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದ್ದು, ಹಳೆಯ ಬಸ್‍ಗಳನ್ನು ಬಳಸಿಕೊಂಡು 2 ಪುರುಷರಿಗೆ ಮತ್ತು 2 ಮಹಿಳೆಯರಿಗೆ ಎಲ್ಲ ಸೌಲಭ್ಯಗಳುಳ್ಳ ಸಂಚಾರಿ ಶೌಚಾಲಯಗಳನ್ನು ಸಾರಿಗೆ ಇಲಾಖೆಯಿಂದ ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೀಡಲಾಗುತ್ತಿದೆ ಎಂದರು.
ಚಾಲಕರಿಗೆ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕೆಂಬ ಉದ್ದೇಶದಿಂದ ರಾಜ್ಯದ ನಾಲ್ಕು ಕಡೆಗೆ ಮುಧೋಳ, ಅಥಣಿ, ಸವದತ್ತಿ ಮತ್ತು ಕೊಪ್ಪಳದಲ್ಲಿ ತಲಾ 15 ಕೋಟಿ ರೂ.ಗಳ ವೆಚ್ಚದಲ್ಲಿ ವಸತಿ ಸಹಿತ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಸಾರಿಗೆ ಇಲಾಖೆಯಿಂದ ಇಲೆಕ್ಟ್ರಿಕ್ ಬಸ್‍ಗಳನ್ನು ಹೊರ ತರಲಾಗುತ್ತಿದ್ದು, ಪ್ರ್ರಾಯೋಗಿಕವಾಗಿ ಬೆಂಗಳೂರಲ್ಲಿ 300 ಮತ್ತು ಹುಬ್ಬಳ್ಳಿಯಲ್ಲಿ 50 ಇಲೆಕ್ಟ್ರಿಕ್ ಬಸ್‍ಗಳನ್ನು ಓಡಿಸಲು ತಯಾರಿ ನಡೆಸಲಾಗುತ್ತಿದೆ ಎಂದರು.
ಹುಬ್ಬಳ್ಳಿಯ ವಾ.ಕ.ರ.ಸಾ.ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಜ್ಯೋತಿ ಬೆಳಗಿಸಿ ಮಾತನಾಡಿ, ವಾಯುವ್ಯ ಸಾರಿಗೆ ಸಂಸ್ಥೆ ಆರು ತಿಂಗಳಲ್ಲಿ ಸಾಕಷ್ಟು ಸಂಕಷ್ಟದಲ್ಲಿದ್ದು, ಲಾಕ್‍ಡೌನಕ್ಕಿಂತ ಮೊದಲು 17ಲಕ್ಷ ಕಿ.ಮೀ ಓಡುತ್ತಿದ್ದ ಬಸ್ಸ್‍ಗಳು ಇಂದು 11ಲಕ್ಷ ಕಿ.ಮೀ ಮಾತ್ರ ಓಡುತ್ತಿವೆ. ಅಂದು 22ಲಕ್ಷ ಜನ ಪ್ರಯಾಣಿಕರು ಸಂಚರಿಸುತ್ತಿದ್ದು, ಇಂದು ಕೇವಲ 7 ಲಕ್ಷ ಜನ ಮಾತ್ರ ಪ್ರಯಾಣಿಸುತ್ತಿರುವದರಿಂದ ನಿಗಮಗಳು ನಷ್ಟದಲ್ಲಿವೆ ಎಂದರು.
ವಿಭಾಗೀಯ ನಿಯಂತ್ರಣಾಧಿಕಾರಿ ಬಸಲಿಂಗಪ್ಪ ಬೀಡಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
ವಿ.ಪ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿದರು.
ಶಾಸಕರು ಹಾಗೂ ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಅಧ್ಯಕ್ಷತೆವಹಿಸಿ ಮಾತನಾಡಿ, ಸವದತ್ತಿ ತಾಲೂಕಿನಲ್ಲಿ ಗ್ರಾಮೀಣ ಸಾರಿಗೆಗೆ ಬಸ್ಸಿನ ಅವಶ್ಯಕತೆಯಿದ್ದು, ಸವದತ್ತಿ ಘಟಕಕ್ಕೆ ಇನ್ನಷ್ಟು ಹೊಸ ಬಸ್ಸಗಳನ್ನು ನೀಡಬೇಕೆಂದರು. ಪ್ರತಿನಿತ್ಯ ಸವದತ್ತಿ ಮಾರ್ಗವಾಗಿ ಬೆಂಗಳೂರಿಗೆ ಸಾಕಷ್ಟು ಖಾಸಗಿ ಬಸ್ಸುಗಳು ಓಡುತ್ತಿದ್ದು, ಪ್ರಯಾಣಿಕರು ಹೆಚ್ಚಿನ ಹಣ ನೀಡಿ ಅವುಗಳಲ್ಲಿ ಪ್ರಯಾಣಿಸುವಂತಾಗಿದೆ. ಆದ್ದರಿಂದ ಸವದತ್ತಿ ಘಟಕಕ್ಕೆ ಎರಡು ಸ್ಲೀಪರ್ ಕೋಚ್ ಬಸ್‍ಗಳನ್ನು ನೀಡಬೇಕೆಂದು ಸಾರಿಗೆ ಸಚಿವರಲ್ಲಿ ವಿನಂತಿಸಿದರು. ಪಟ್ಟಣದಲ್ಲಿ 2ಕೋಟಿ ರೂ.ಗಳ ವೆಚ್ಚದಲ್ಲಿ ಆಧುನಿಕ ಮಾದರಿಯ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, 2 ಕೋಟಿ ರೂ.ಗಳಲ್ಲಿ ತಾಲೂಕು ಕ್ರೀಡಾಂಗಣವನ್ನು ಅಭಿವೃದ್ದಿಪಡಿಸಲಾಗುತ್ತಿದೆ ಎಂದರು.
ವಾ.ಕ.ರ.ಸಾ.ಸಂಸ್ಥೆ ನಿರ್ದೇಶಕ ಅಶೋಕ ಮಳಗಿ, ಹುಬ್ಬಳ್ಳಿ ವಾ.ಕ.ರ.ಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ, ಎಪಿಎಮ್‍ಸಿ ಅಧ್ಯಕ್ಷ ಪ್ರಕಾಶ ನರಿ, ಪಿಎಲ್‍ಡಿ ಬ್ಯಾಂಕ ಅಧ್ಯಕ್ಷ ಜಗದೀಶ ಶಿಂತ್ರಿ, ಪುರಸಭೆ ಸದಸ್ಯರಾದ ರಾಜಶೇಖರ ಕಾರದಗಿ, ದೀಪಕ ಜಾನ್ವೇಕರ, ಶಿವಾನಂದ ಹೂಗಾರ, ಅರ್ಜುನ ಅಮ್ಮೋಜಿ, ತಹಸೀಲ್ದಾರ ಪ್ರಶಾಂತ ಪಾಟೀಲ, ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ ಉಪಸ್ಥಿತರಿದ್ದರು. ಸುನೀಲ ಪತ್ರಿ ನಿರೂಪಿಸಿ ವಂದಿಸಿದರು.