ಸವಣೂರಿನಲ್ಲಿ ಶಾಂತಿಯುತ ಮತದಾನ


ಸವಣೂರು,ಡಿ.28- ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆಯು ಅತ್ಯಂತ ಶಾಂತಿಯುತವಾಗಿ ನಡೆದಿದ್ದು, ಸವಣೂರ ತಾಲೂಕಿನ ಒಟ್ಟು 140 ಮತೆಗಟ್ಟೆಗಳಲ್ಲಿ ಶೇ. 84 ರಷ್ಟು ಮತದಾರರು 859 ಅಭ್ಯರ್ಥಿಗಳಿಗೆ ರಾಜಕೀಯ ಭವಿಷ್ಯ ಬರೆದಿದ್ದಾರೆ.
ತಾಲೂಕಿನ 21 ಗ್ರಾಮ ಪಂಚಾತಿಗಳ ಪೈಕಿ ಹಿರೇಮುಗದೂರ ಪಂಚಾಯತಿಯ ನದಿನೀರಲಗಿ ಭಾಗ ಸಂಖ್ಯೆ 57ರಲ್ಲಿ ಗರಿಷ್ಠ 92.75 ರಷ್ಟು ಮತದಾನವಾದರೆ, ಕಾರಡಗಿ ಪಂಚಾಯತಿಯ ಕಾರಡಗಿಯ ಭಾಗ ಸಂಖ್ಯೆ 1 ರಲ್ಲಿ ಕನಿಷ್ಠ 78.63 ರಷ್ಟು ಮತದಾನ ನಡೆದಿದೆ ಎಂದು ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ತಿಳಿಸಿದ್ದಾರೆ.
ಬೆಳ್ಳಿಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಕಾರ್ಯಕ್ಕೆ ಚಳಿಯನ್ನೂ ಲೆಕ್ಕಿಸದೆ ಕೆಲವೆಡೆ ಗ್ರಾಮಸ್ಥರು ಅತ್ಯಂತ ಹುರುಪಿನಿಂದ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರೆ, ಬಹುತೇಕ ಮತಗಟ್ಟೆಗಳಲ್ಲಿ ಹೊತ್ತೇರಿ ಸೂರ್ಯ ನೆತ್ತಿಯ ಮೇಲೆ ಬಿಸಿಲು ಚುರುಗುಡುತ್ತಿದ್ದಂತೆಯೇ… ಮತದಾನ ಕೂಡ ಚುರುಕುಗೊಂಡಿತು. ಹಲವು ಮತಗಟ್ಟೆಗಳಲ್ಲಿ ಮತದಾರರು ಮತ ಹಾಕಲು ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಂಜೆ 5 ಗಂಟೆ ವೇಳೆಗೆ 92740 ಮತದಾರರ ಪೈಕಿ 77572 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ತಾಲೂಕಿನ ಕಳಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಯುವತಿಯರು ಮೊದಲ ಬಾರಿಗೆ ಮತದಾನ ಮಾಡಿ ಗಮನ ಸೆಳೆದರು. ಹುರುಳಿಕುಪ್ಪಿ ಗ್ರಾಮದ ಮತಗಟ್ಟೆಗೆ 92 ವೃದ್ಧೆ ವ್ಹೀಲ್ ಚೇರನಲ್ಲಿ ಆಗಮಿಸಿ ಮತದಾನ ಮಾಡಿದರೆ, ಜಲ್ಲಾಪೂರ ಗ್ರಾಮದ ಮತಗಟ್ಟೆ ಸಂಖ್ಯೆ 62ರಲ್ಲಿ ಬಾಣಂತಿ ಮಹಿಳೆ ಮಗುವಿನೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು, ವಿಶೇಷವಾಗಿತ್ತು.
ಕೊರೊನಾ ಹಿನ್ನೆಲೆಯಲ್ಲಿ ತಾಲೂಕಾಡಳಿತದ ವತಿಯಿಂದ ಪ್ರತಿ ಮತಗಟ್ಟೆಯಲ್ಲೂ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿದ್ದು, ಮತಗಟ್ಟೆಗೆ ಬರುವ ಪ್ರತಿ ಮತದಾರರನ್ನು ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸಿ, ಕೈಗಳಿಗೆ ಸ್ಯಾನಿಟೈಜರ್ ಹಾಕಿ ಮತ ಹಾಕಲು ಅವಕಾಶ ನೀಡಲಾಯಿತು. ಇದಕ್ಕಾಗಿ ಪ್ರತಿ ಮತಗಟ್ಟೆಯಲ್ಲು ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು. ಇಂದಿನ ಮತದಾನ ಸಂದರ್ಭದಲ್ಲೂ ಪ್ರತಿಮತಗಟ್ಟೆಗೂ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ತಹಶೀಲ್ದಾರ ಮಲ್ಲಿಕಾರ್ಜುನ ತಾಲೂಕಿನ 140 ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ಕೈಗೊಂಡರು.
ಚುನಾವಣೆ ನಿಮಿತ್ತ ಟ್ರೇನಿಂಗ್ ನೋಡಲ್ ಅಧಿಕಾರಿ ಅಣ್ಣಪ್ಪ ಹೆಗಡೆ ಅವರು ಹಾಗೂ ಮಾಸ್ಟರ್ ಟ್ರೇನರ್ ಆಗಿರುವ ವಿದ್ಯಾಧರ ಕುತನಿ ಅವರು, ಮತೆಗಟ್ಟೆಗಳಲ್ಲಿನ ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿದ್ದಷ್ಟೇ ಅಲ್ಲದೇ ಮತದಾರ ಪರ ಕಾಳಜಿ ತೋರಿದ್ದು ವಿಶೇಷವಾಗಿತ್ತು.