ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ – ಬಾಲಕ ಬಂಧನ

ಮುಂಬೈ,ಏ.೧೧- ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ನೆರೆಯ ಥಾಣೆ ಜಿಲ್ಲೆಯ ೧೬ ವರ್ಷದ ಬಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಮುಂಬೈ ಪೊಲೀಸರ ಮುಖ್ಯ ನಿಯಂತ್ರಣ ಕೊಠಡಿಗೆ ಸೋಮವಾರ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಬಂದಿದೆ. ಈ ಹಿನ್ನೆಲೆ, ಪೊಲೀಸರು ತನಿಖೆ ಆರಂಭಿಸಿದ್ದು, ತಾಂತ್ರಿಕ ಸಹಾಯದಿಂದ ಅವರು ಮುಂಬೈನಿಂದ ೭೦ ಕಿಮೀ ದೂರದಲ್ಲಿರುವ ಥಾಣೆ ಜಿಲ್ಲೆಯ ಶಹಾಪುರದಿಂದ ಕರೆ ಬಂದ ಸಂಖ್ಯೆಯನ್ನು ಟ್ರ್ಯಾಕ್ ಮಾಡಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸ್ ತಂಡ ಶಹಾಪುರಕ್ಕೆ ತೆರಳಿ ಅಲ್ಲಿ ೧೬ ವರ್ಷದ ಬಾಲಕ ಬೆದರಿಕೆ ಕರೆ ಮಾಡಿರುವುದು ಪತ್ತೆಯಾಯಿತು ಎಂದು ಅವರು ಹೇಳಿದರು. ರಾಜಸ್ಥಾನ ಮೂಲದ ಬಾಲಕನನ್ನು ಬಂಧಿಸಲಾಗಿದೆ. ಮುಂದಿನ ಕಾನೂನು ಪ್ರಕ್ರಿಯೆಗಾಗಿ ಮುಂಬೈನ ಆಜಾದ್ ಮೈದಾನ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.