ಸಲಿಂಗ ವಿವಾಹ ಮಾನ್ಯ ಮಸೂದೆಗೆ ಅಸ್ತು

ವಾಷಿಂಗ್ಟನ್, ಜು.೨೦- ಸಲಿಂಗ ವಿವಾಹವನ್ನು ಸಿಂಧು ಎಂದು ಪರಿಗಣಿಸುವ ಮಸೂದೆಯನ್ನು ಅಮೆರಿಕ ಕಾಂಗ್ರೆಸ್‌ನ ಜನಪ್ರತಿನಿಧಿ ಸಭೆ ಅನುಮೋದಿಸಿದೆ.
ಡೆಮಾಕ್ರಟಿಕ್ ಪಕ್ಷದ ನಿಯಂತ್ರಣದಲ್ಲಿರುವ ಸದನವು ವಿವಾಹ ಗೌರವ ಕಾಯ್ದೆಯನ್ನು ೨೬೭-೧೫೭ ಮತಗಳಿಂದ ಅನುಮೋದಿಸಿತು. ಆದರೆ ಸೆನೆಟ್‌ನಲ್ಲಿ ಇದರ ಅವಕಾಶಗಳು ಅನಿಶ್ಚಿತವಾಗಿವೆ. ಅಲ್ಲದೆ ಇಂತಹ ಸಂಯೋಗಕ್ಕೆ ಮಾನ್ಯತೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸುವ ಭೀತಿ ಇದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಈ ಮಸೂದೆಯ ಪರ ಡೆಮಾಕ್ರಟಿಕ್ ಪಕ್ಷದ ಸಂಸದರ ಜತೆಗೆ ೪೭ ಮಂದಿ ರಿಪಬ್ಲಿಕನ್ ಜನಪ್ರತಿನಿಧಿಗಳು ಕೂಡ ಮತ ಚಲಾಯಿಸಿದರು. ೧೦೦ ಸದಸ್ಯರ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷದ ೫೦ ಸದಸ್ಯರಿದ್ದು, ಸದನಕ್ಕೆ ಮಸೂದೆಯನ್ನು ತರಲು ೧೦ ರಿಪಬ್ಲಿಕನ್ ಸದಸ್ಯರ ಮತ ಅಗತ್ಯವಿದೆ. ರೆಸ್ಪೆಕ್ಟ್ ಫಾರ್ ಮ್ಯಾರೇಜ್ ಕಾಯ್ದೆಯು ಜಾರಿಗೆ ಬಂದಲ್ಲಿ, ಅಮೆರಿಕದ ಎಲ್ಲ ರಾಜ್ಯಗಳು ಇನ್ನೊಂದು ರಾಜ್ಯದಲ್ಲಿ ನಡೆದ ವಿವಾಹಕ್ಕೆ ತಮ್ಮ ರಾಜ್ಯದಲ್ಲೂ ಮಾನ್ಯತೆ ನೀಡಬೇಕಾಗುತ್ತದೆ. ಕೇವಲ ಸಲಿಂಗ ವಿವಾಹಕ್ಕೆ ಮಾತ್ರವಲ್ಲದೆ, ಅಂತರ್ ವರ್ಣ ವಿವಾಹಗಳಿಗೂ ಇದು ಅನ್ವಯಿಸುತ್ತದೆ. ಹಿಂದೆ ಜಾರಿಯಲ್ಲಿದ್ದ ಪುರುಷ- ಮಹಿಳೆಯ ವಿವಾಹಕ್ಕೆ ಸಂಬಂಧಿಸಿದ ೧೯೯೬ರ ಡಿಫೆನ್ಸ್ ಆಫ್ ಮ್ಯಾರೇಜ್ ಕಾಯ್ದೆಯ ಜಾಗದಲ್ಲಿ ಹೊಸ ಕಾಯ್ದೆ ಜಾರಿಗೆ ಬರಲಿದೆ. ಡಿಫೆನ್ಸ್ ಆಫ್ ಮ್ಯಾರೇಜ್ ಕಾಯ್ದೆಯ ಭಾಗವನ್ನು ಸುಪ್ರೀಂಕೋರ್ಟ್ ೫-೪ ಮತಗಳಿಂದ ತಳ್ಳಿಹಾಕಿತ್ತು. ಸಲಿಂಗ ವಿವಾಹವಾದ ದಂಪತಿಗಳಿಗೆ ಸರ್ಕಾರದ ಪ್ರಯೋಜನಗಳನ್ನು ಇದು ನಿರಾಕರಿಸುತ್ತದೆ.