ಸಲಿಂಗ ವಿವಾಹ ಮಾನ್ಯತೆ: ಚರ್ಚೆಗೆ ಅವಕಾಶ ಕೋರಿ ಮುರ್ಮುಗೆ ಪತ್ರ

ಬೆಂಗಳೂರು, ಮೇ.೧೮-ಸಲಿಂಗ ವಿವಾಹಕ್ಕೆ ಮ್ಯಾನತೆ, ಲೈಂಗಿಕ ಅಲ್ಪಸಂಖ್ಯಾತರು ದಿನ ನಿತ್ಯ ತಮ್ಮ ಬದುಕಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲು ರಾಜ್ಯಸಭಾ, ವಿಧಾನಪರಿಷತ್ತಿನಲ್ಲಿ ತಮಗೆ ಸಮುದಾಯಕ್ಕೆ ಸೂಕ್ತ ಸ್ಥಾನ ಒದಗಿಸಬೇಕು ಎಂದು ಆಗ್ರಹಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಪತ್ರ ಬರೆದಿದ್ದಾರೆ.
ಅಂತಾರಾಷ್ಟ್ರೀಯ ಲಿಂಗತ್ವ ವಿರುದ್ಧ ದೌರ್ಜನ್ಯ, ಲೈಂಗಿಕ ಅಲ್ಪಸಂಖ್ಯಾತರ ವಿರೋಧಿ ದಿನ(ಎಲ್‌ಜಿಬಿಟಿಕ್ಯೂಐಎ) ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿರುವ ಅವರು,
ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಲು ಇರುವ ಸಮಸ್ಯೆಗಳ ಪರಿಹರಿಸಲು ಸಮಿತಿ ರಚನೆ ಸೇರಿದಂತೆ ಇನ್ನಿತರೆ ಬೆಳವಣಿಗೆಗಳ ಕುರಿತು ಸದನದಲ್ಲಿ ಚರ್ಚಿಸಲು ಲೈಂಗಿಕ ಅಲ್ಪಸಂಖ್ಯಾತರಿಗೂ ಅವಕಾಶ ನೀಡಬೇಕು. ಅದು ಅಲ್ಲದೆ, ತಮ್ಮದೇ ಸಮಸ್ಯೆಗಳ ಕುರಿತು ಮಾತನಾಡಲು ನಮಗೆ ಅವಕಾಶ ಇಲ್ಲದಿರುವುದು ಖಂಡನೀಯ ಎಂದರು.
ಈ ಬಾರಿ ಸಲಿಂಗ ವಿವಾಹ ಕುರಿತು ಚರ್ಚೆ ನಡೆಸುವ ಸಲುವಾಗಿ ಸದನಕ್ಕೆ ತೆರಳಲು ನಮಗೆ ಅವಕಾಶ ಕಲ್ಪಿಸಬೇಕು.ಅದೇ ರೀತಿ ಆಯಾ ರಾಜ್ಯಗಳಲ್ಲಿಯೂ ವಿಧಾನ ಪರಿಷತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದ ಅವರು, ಲೈಂಗಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವ ಪೊಲೀಸರು ಮತ್ತಿತರರ ವಿರುದ್ಧ ಕಠಿಣ ಕ್ರಮದ ಕಾನೂನು, ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು, ಮನೆ, ಮಕ್ಕಳ ಶಿಕ್ಷಣಕ್ಕೆ ನೆರವು, ಆರೋಗ್ಯ ಹಾಗೂ ಪಿಂಚಣಿ ಸೌಲಭ್ಯ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯ ಮಾಡಿದರು.
ಲೈಂಗಿಕ ಕಾರ್ಯಕರ್ತೆಯರಿಗೆ ಕಾನೂನಿನಲ್ಲಿ ಅವಕಾಶ ಕಲ್ಪಿಸಿ ಕೊಡಲಾಗಿದೆಯಾದರೂ ಅವರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಾಜದಲ್ಲಿ ಗೌರವ, ಸ್ವಾಭಿಮಾನದಿಂದ ಬದುಕುವಂತಾಗಬೇಕು. ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಕಠಿಣ ಕಾನೂನಿನ ಅಗತ್ಯವಿದೆ ಎಂದೂ ಅಕ್ಕೈ ಪದ್ಮಶಾಲಿ ನುಡಿದರು.