ಸರ್.‌ ಎಂ.ವಿ. ಸವಿನೆನಪಿಗಾಗಿ `ಇಂಜಿನಿಯರ್‌ಗಳ ದಿನ’

ಮೋಕ್ಷಗುಂಡಂ ವಿಶ್ವೇಶ್ವರಯ್ಯ… ಕರುನಾಡಿನ ಹೆಮ್ಮಯ ಪುತ್ರ. ಭಾರತದ ಕಂಡ ಅಪ್ರತಿಮ ಇಂಜಿನಿಯರ್. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದ ವಿಶ್ವೇಶ್ವರಯ್ಯನವರು ನೀಡಿದ ಕೊಡುಗೆ ಅಪೂರ್ವ. ಇದೇ ಕಾರಣಕ್ಕೆ ವಿಶ್ವೇಶ್ವರಯ್ಯನವರ ಜನ್ಮದಿನವಾದ ಸೆಪ್ಟಂಬರ್‌ 15ರಂದು ಪ್ರತಿವರ್ಷ ಭಾರತದಲ್ಲಿ `ಇಂಜಿನಿಯರ್‌ಗಳ ದಿನ’ ಎಂದು ಆಚರಿಸಲಾಗುತ್ತದೆ.

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಪಾರ ಸೇವೆಯ ನೆನಪಿಗಾಗಿ ಇವರ ಜನ್ಮ ದಿನವನ್ನು ಇಂಜಿನಿಯರ್ ದಿನವಾಗಿ ಆಚರಿಸಲಾಗುತ್ತದೆ. ಸೆಪ್ಟೆಂಬರ್ 15, 1860ರಂದು ಜನಿಸಿದ ಇವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಮುಂಬೈ ರಾಜ್ಯದ ಪೂನಾದಲ್ಲಿ 1884 ರಲ್ಲಿ ಇಂಜನಿಯರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂಬೈ ಸರ್ಕಾರದಲ್ಲಿ ಸೇವೆಯನ್ನು ಆರಂಭಿಸಿದರು. 1907 ರವರೆಗೆ ಮುಂಬೈ ಸರ್ಕಾರದಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಮುಂದಿನ ಅವಧಿಯಲ್ಲಿ ಇಡೀ ಭಾರತ ದೇಶದಲ್ಲಿ ತಮ್ಮ ಪ್ರತಿಭೆಯಿಂದ ಹಾಗೂ ಕಾರ್ಯಗಳಿಂದ ಪ್ರಸಿದ್ಧರಾದವರು.

1968 ರಲ್ಲಿ, ಭಾರತ ಸರ್ಕಾರವು ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯನ್ನು ಎಂಜಿನಿಯರ್‌ಗಳ ದಿನವೆಂದು ಘೋಷಿಸಿತು. ಅಂದಿನಿಂದ, ಈ ದಿನವನ್ನು ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಿದ ಮತ್ತು ಇನ್ನೂ ಮಾಡುತ್ತಿರುವ ಎಲ್ಲ ಎಂಜಿನಿಯರ್‌ಗಳನ್ನು ಗೌರವಿಸಲು ಮತ್ತು ಅಂಗೀಕರಿಸಲು ಆಚರಿಸಲಾಗುತ್ತದೆ.

1903 ರಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಸ್ವಯಂಚಾಲಿತ ತಡೆಗೋಡೆ ವಾಟರ್ ಫ್ಲಡ್‌ಗೇಟ್‌ಗಳನ್ನು ವಿನ್ಯಾಸಗೊಳಿಸಿ ಪೇಟೆಂಟ್ ಪಡೆದರು. ಬ್ಲಾಕ್ ಸಿಸ್ಟಮ್ ಎಂದೂ ಕರೆಯುತ್ತಾರೆ, ಇದು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿದ್ದು ಅದು ನೀರಿನ ಉಕ್ಕಿ ಹರಿಯುವ ಸಂದರ್ಭದಲ್ಲಿ ಮುಚ್ಚುತ್ತದೆ. ಇದನ್ನು ಮೊದಲು ಪುಣೆಯ ಖಡಕ್ವಾಸ್ಲಾ ಜಲಾಶಯದಲ್ಲಿ ಸ್ಥಾಪಿಸಲಾಯಿತು. ಚಿಕ್ಕಬಳ್ಳಾಪುರ ಸಮೀಪದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಸರ್ ಎಂ ವಿಶ್ವೇಶ್ವರಯ್ಯ ಅವರು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಅಧ್ಯಯನ ಮಾಡಿದರು ಮತ್ತು ಸಿವಿಲ್ ಇಂಜಿನಿಯರಿಂಗ್ ಅನ್ನು ಪುಣೆಯ ವಿಜ್ಞಾನ ಕಾಲೇಜಿನಲ್ಲಿ ಮಾಡಿದರು. 1917 ರಲ್ಲಿ ಅವರು ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು, ಇದನ್ನು ಈಗ ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂದು ಕರೆಯಲಾಗುತ್ತದೆ.

ಮುಂಬೈ ರಾಜ್ಯದಲ್ಲಿ ವಿಶ್ವೇಶ್ವರಯ್ಯನವರ ಸೇವೆ ಅಸಾಧಾರಣ. ಪುಣೆ, ಕೊಲ್ಹಾಪುರ, ಸೋಲಾಪುರ, ವಿಜಾಪುರ, ಮತ್ತು ಧಾರವಾಡ ಈ ನಗರಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಮುಂಬೈ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಇಟಲಿ ದೇಶದ ಮಿಲಾನ್ ಮತ್ತು ಈಡನ್ ನಗರಗಳಿಗೆ ಭೇಟಿ ನೀಡಿ ಆ ನಗರಗಳ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ಯೋಜನೆಯನ್ನು ರೂಪಿಸಿದ್ದರು.

1902 ರಲ್ಲಿ ವಿಶ್ವೇಶ್ವರಯ್ಯ ನವರು ಮುಂಬೈಯಲ್ಲಿ ಸೇವೆಯಲ್ಲಿದ್ದಾಗಲೇ “Present State of Education in Mysore” ಎನ್ನುವ ಪುಸ್ತಕವನ್ನು ಬರೆದು ಆಗಿನ ಮೈಸೂರು ಸಂಸ್ಥಾನದಲ್ಲಿ ಇರುವ ಸ್ಥಿತಿಗತಿಗಳನ್ನು ಉತ್ತಮ ಪಡಿಸುವುದಕ್ಕಾಗಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ರೂಪುರೇಷೆಗಳನ್ನು ಹಾಕಿದ್ದರು. ಮುಂಬೈ ರಾಜ್ಯದಲ್ಲಿ ಇವರು ನಿವೃತ್ತಿ ಪಡೆದುಕೊಂಡ ನಂತರ ಹೈದ್ರಾಬಾದ್ ಸಂಸ್ಥಾನದ ನಿಜಾಮರ ಕರೆ ಮೇರೆಗೆ 1908ರಲ್ಲಿ ಹೈದ್ರಾಬಾದ್ ನಗರದ ನೀರು ಸರಬರಾಜು ಒಳಚರಂಡಿ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಒಂದು ಯೋಜನೆಯನ್ನು ವಿನ್ಯಾಸಗೊಳಿಸಿದರು. ವಿಶ್ವೇಶ್ವರಯ್ಯನವರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೈದ್ರಾಬಾದ್ ಸಂಸ್ಥಾನದ ನಿಜಾಮರು ವಿಶ್ವೇಶ್ವರಯ್ಯನವರು ರೂಪಿಸಿದ ಯೋಜನೆಯನ್ನು ಅನುಷ್ಠಾನಗೊಳಿಸಿದರು.

ಕರುನಾಡ ಜೀವನದಿ ಕಾವೇರಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯಲ್ಲಿ ಕಟ್ಟಲಾದ ಕೃಷ್ಣರಾಜ ಸಾಗರ ಅಣೆಕಟ್ಟು ಸರ್ ಎಂ ವಿಶ್ವೇಶ್ವರಯ್ಯನವರ ಶ್ರಮದ ಫಲ. ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ದಿವಾನರಾಗಿದ್ದ ವಿಶ್ವೇಶ್ವಯ್ಯನವರು ದೂರದೃಷ್ಟಿಯುಳ್ಳ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದರು. ಮೈಸೂರು ಸ್ಯಾಂಡಲ್ ಸೋಪ್, ಜೋಗದ ಶರಾವತಿ ವಿದ್ಯುತ್ ಯೋಜನೆ, ಭದ್ರವತಿ ಉಕ್ಕಿನ ಕಾರ್ಖಾನೆ ಹೀಗೆ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದೇ ಇದೆ. ಇವರ ಈ ದೂರದರ್ಶಿತ್ವದ ನಡೆಯಿಂದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಸರ್ ಎಂ ವಿಶ್ವೇಶ್ವರಯ್ಯನವರ ಸಾಧನೆಗೆ `ಭಾರತರತ್ನ’ ಎಂಬ ಶ್ರೇಷ್ಠ ಗೌರವದೊಂದಿಗೆ ಅನೇಕ ಪ್ರಶಸ್ತಿ, ಗೌರವಗಳು ಇವರ ಮುಕುಟಕ್ಕೇರಿದೆ.

ಒಂದು ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರವೂ ಹಿರಿದು. ಹೀಗಾಗಿ, ದೇಶವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಲು ಮತ್ತು ಆರ್ಥಿಕವಾಗಿ ಸದೃಢವನ್ನಾಗಿಸಲು ನೆರವಾಗುವ ಎಂಜಿನಿಯರ್‌ಗಳ ಸೇವೆಯನ್ನು ಸ್ಮರಿಸುವ, ತನ್ಮೂಲಕ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ `ಇಂಜಿನಿಯರ್‌ಗಳ ದಿನ’ವನ್ನು ಆಚರಿಸಲಾಗುತ್ತದೆ.