ಸರ್.ಎಂ.ವಿ ಪ್ರತಿಮೆ ಸ್ಥಾಪಿಸಲು ಒತ್ತಾಯ


ಧಾರವಾಡ ಸೆ ೧೬ :ಧಾರವಾಡದ ಕೆಲಗೇರಿ ಕೆರೆಯ ದಂಡೆಯ ಮೇಲೆ ಸರ್ ಎಂ.ವಿಶ್ವೇಶ್ವರಯ್ಯನವರ ಪ್ರತಿಮೆಯನ್ನು ಸ್ಥಾಪಿಸಲು ಧಾರವಾಡ ರಾಣಿಚನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ನಿರ್ದೇಶಕ ಬಸವರಾಜ ಮಲಕಾರಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸರ್.ಎಂ. ವಿಶ್ವೇಶ್ವರಯ್ಯನವರ ಜನುಮ ದಿನದ ಹಾಗೂ ಎಂಜಿನಿಯರ್ಸ್ ದಿನಾಚರಣೆಯ ಕಾರ್ಯಕ್ರಮವನ್ನುದ್ದೇಶಿಸಿ ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಆಣೆಕಟ್ಟು ಕಟ್ಟಿ ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರಾವರಿ ಒದಗಿಸಿದ ಆಧುನಿಕ ಭಗೀರಥ ವಿಶ್ವೇಶ್ವರಯ್ಯನವರು.ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಸಿಂಧ್ ,ಸೂರತ್,ಪುಣೆ ಇನ್ನು ಮುಂತಾದ ನಗರಸಭೆ, ಪುರಸಭೆಗಳಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿ ವಿವಿಧ ಹುದ್ದೆ ಅಲಂಕರಿಸಿ ಪಟ್ಟಣಗಳನ್ನು ಬಹುತೇಕ ಅಭಿವೃದ್ಧಿಗೊಳಿಸಿದ ಅವರ ಕಾರ್ಯ ಅಸ್ಮರಣೀಯ ಎಂದರು.
ಅಲ್ಲದೇ ಧಾರವಾಡದ ಸುಪ್ರಸಿದ್ಧ ಕೆಲಗೇರಿ ಕೆರೆಯನ್ನು 1911 ರಲ್ಲಿ ಸಂಪೂರ್ಣ ಪುನರುಜ್ಜೀವನ ಗೊಳಿಸಿದ್ದು ಸರ್ ಎಂ. ವಿಶ್ವೇಶ್ವರಯ್ಯನವರು. ಆದರೆ ಅವರ ನೆನಪಿಗಾಗಿ ಕೆರೆಯ ದಂಡೆಯ ಮೇಲೆ ಅವರ ಪ್ರತಿಮೆಯನ್ನು ಸ್ಥಾಪಿಸಲು ಗ್ರಾಮದ ಜನತೆ ದಶಕಗಳಿಂದ ಹೋರಾಡುತ್ತಿದ್ದರು ಕೂಡ ಸರ್ಕಾರ ಹಾಗೂ ಸಂಬಂಧಪಟ್ಟ ಮಹಾನಗರ ಪಾಲಿಕೆ ನಿಷ್ಕಾಳಜಿ ತೋರುತ್ತಿದ್ದು ಸುಮಾರು ಏಳು ಅಡಿ ಎತ್ತರದ ಕಂಚಿನ ಪ್ರತಿಮೆ ಪಾಲಿಕೆಯಲ್ಲಿ ಧೂಳು ತಿನ್ನುತ್ತಿದ್ದು ಅದನ್ನು ಪ್ರತಿಷ್ಠಾಪನೆ ಮಾಡದೆ ಪಾಲಿಕೆಯು ದೇಶವನ್ನೇ ಆಧುನಿಕತೆಯ ಕಡೆಗೆ ಕೊಂಡೊಯ್ದ ಸರ್ ಎಂ.ವಿಶ್ವೇಶ್ವರಯ್ಯನವರಿಗೆ ಅವಮಾನ ಮಾಡುತ್ತಿದೆ. ಕೂಡಲೇ ಸಂಭಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಬಿಜೆಪಿ ಶಾಸಕರು ಈ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳುವ ಮೂಲಕ ಸರ್ ಎಂ.ವಿಶ್ವೇಶ್ವರಯ್ಯನವರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಬೇಕು ಎಂದು ಮಲಕಾರಿ ಒತ್ತಾಯಿಸಿದ್ದಾರೆ.
ಕಾರ್ಯಕ್ರದ ಅಧ್ಯಕ್ಷತೆಯನ್ನು ಗ್ರಾಮದ ಪ್ರಮುಖರಾದ ರುದ್ರಗೌಡ ಪಾಟೀಲ ವಹಿಸಿದ್ದರು.ಕಾರ್ಯಕ್ರಮದಲ್ಲಿ ನಾಗರಾಜ ಗೌರಿ,ಹೇಮಂತ ಗುರ್ಲಹೊಸೂರ,ರಮೇಶ ನಲವಡಿ,ನಾಗಪ್ಪ ತಲವಾಯಿ,ಶಂಕರ ಮುಗಳಿ,ಬಸಯ್ಯ ಹಿರೇಮಠ,ವಾಲ್ಮೀ ನಿರ್ದೇಶಕ ರಾಜೇಂದ್ರ ಪೊದ್ದಾರ್,ವಾಲ್ಮೀ ಎಂಜಿನೀಯರ ಸತ್ಯನಾರಾಯಣ, ಸಿ ಎಸ್ ಪಾಟೀಲ, ವಿಜಯಲಕ್ಷ್ಮಿ ಲೂತಿಮಠ,ಶಿವನಪ್ಪ ಸಾದರ,ಬಶೇಕನಗೌಡ ಪಾಟೀಲ, ಕರಿಬಸಯ್ಯ ಕಡ್ಲಿ ಸೇರಿದಂತೆ ಗ್ರಾಮಸ್ಥರು, ಮುಖಂಡರು ಉಪಸ್ಥಿತರಿದ್ದರು.