ಸರ್ ಎಂ.ವಿ. ಜಗತ್ತು ಕಂಡ ಶ್ರೇಷ್ಠ ಇಂಜೀನಿಯರ್


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.17: ಸರ್.ಎಂ.ವಿಶ್ವೇಶ್ವರಯ್ಯ ಜಗತ್ತುಕಂಡ ಶ್ರೇಷ್ಠ ಇಂಜೀನಿಯರ್ ಆಗಿದ್ದು, ಬಾಂಬೆ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನಪಡೆದು ತೇರ್ಗಡೆಯಾದ ಇವರಿಗೆ ಅಂದಿನ ಬಾಂಬೆ ಸರ್ಕಾರ ಲೋಕೋಪಯೋಗಿ ಇಲಾಖೆಯಲ್ಲಿ ಅಭಿಯಂತರರಾಗಿ ನೇಮಿಸಿಕೊಂಡಿತ್ತು. ಕೆಲಸಕ್ಕೆ ಸೇರಿದ ಕೆಲವೇ ತಿಂಗಳುಗಳಲ್ಲಿ ಪನ್ಜಾರಾ ನದಿಯಿಂದ ದಾತಾರಿ ಎಂಬ ಹಳ್ಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಿದ್ದರು. ಅಂದಿನಿಂದ ಶುರುವಾದ ಅವರ ಸಾರ್ವಜನಿಕ ಕೆಲಸಗಳು 7ದಶಕಗಳ ಕಾಲ ನಿರಂತರವಾಗಿ ನಡೆದಿತ್ತು ಎಂದು ತಾ.ಪಂ. ಇ.ಒ. ಎಂ. ಬಸಪ್ಪ ತಿಳಿಸಿದರು.
ನಗರದ ತಾ.ಪಂ. ಸಭಾಂಗಣದಲ್ಲಿ ನರೇಗಾ ಯೋಜನೆಯ ಇಂಜೀನಿಯರ್‍ಗಳಿಂದ ಹಮ್ಮಿಕೊಂಡಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವೇಶ್ವರಯ್ಯನವರ ಕಾರ್ಯಸಾಧನೆ ಮತ್ತು ಯೋಜನೆಗಳು ಇಂದಿನ ಯುವಕರಿಗೆ ಪ್ರೇರಣೆಯಾಗಿವೆ.ವಿಶ್ವೇಶ್ವರಯ್ಯನವರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೈದ್ರಾಬಾದ್ ಸಂಸ್ಥಾನದ ನಿಜಾಮರು ಯೋಜನೆಯನ್ನು ಅನುಷ್ಠಾನಗೊಳಿಸಿದರು. ಹೈದ್ರಾಬಾದ ನಗರವನ್ನು ನವೀಕರಿಸುವಲ್ಲಿ ವಿಶ್ವೇಶ್ವರಯ್ಯನವರ ಪಾತ್ರ ಪ್ರಮುಖವಾಗಿದೆ.
ಇವರ ಸಾಧನೆಗೆ ಮೈಸೂರು ಮಾತ್ರವಲ್ಲ ಸಿಂದ್ ಪ್ರಾಂತ್ಯ, ಬಾಂಬೇ ಪ್ರೆಸಿಡೆನ್ಸಿ, ಹೈದ್ರಾಬಾದ್ ಪ್ರೆಸಿಡೆನ್ಸಿಗಳಿಗೆ ಇವರ ಕೊಡುಗೆ ಅಪಾರವಾಗಿದೆ. 1915ರಲ್ಲಿ ಬ್ರಿಟೀಷ್ ಸರ್ಕಾರ ಇವರ ಸೇವೆಯನ್ನು ಮೆಚ್ಚಿ ನೈಟ್ ಕಮಾಂಡರ್ ಆಫ್ ಆರ್ಡರ್ ಆಫ್ ಇಂಡಿಯನ್ ಎಂಪೈರ್ ಎಂದು ಬಿರುದು ನೀಡಿ ಗೌರವಿಸಿತ್ತು. ಇವರ ಬದುಕು, ಸಾಧನೆ ನಮಗೆಲ್ಲ ಪ್ರೇರಣೆಯಾಗಬೇಕೆಂದು ಹೇಳಿದರು.
ಅಕ್ಷರದಾಸೊಹ ತಾ.ನಿರ್ದೇಶಕ ಪದ್ಮನಾಭ, ನರೇಗಾ ಯೋಜನೆ ತಾ.ನಿರ್ದೇಶಕಿ ರಾಜೇಶ್ವರಿ, ಜೆ.ಇ.ಗಳಾದ ಯಶೋಧ, ಸುರೇಶ ಮತ್ತು ತಾ.ಪಂ. ಸಿಬ್ಬಂದಿಗಳು ಇದ್ದರು.