ಸರ್ವ ಸಮಾಜದ ಏಳಿಗೆಗೆ ಶ್ರಮಿಸಿದ ಸಂತ ಸೇವಾಲಾಲ್ ಮಹಾರಾಜರು


ನರೇಗಲ್ಲ,ಮಾ.2: ಬುದ್ದ, ಬಸವ, ಕಬೀರ, ಗುರುನಾನಕ ಮುಂತಾದ ಧಾರ್ಮಿಕ ಮಾನವತಾವಾದಿಗಳ ಮಧ್ಯೆ ಒಬ್ಬ ಸಾಮಾನ್ಯ ವ್ಯಕ್ತಿ ದನಗಳನ್ನು ಮೇಯಿಸುತ್ತಾ ದನಗಾಹಿ ಗೋಪಾಲನಾಗಿದ್ದ ಶ್ರೀ ಸೇವಾಲಾಲ್ ಮಹಾರಾಜರು ತಮ್ಮ ಜೀವನ ಅನುಭವದ ಮೂಲಕ ಗೌರವಯುತ ಮಾತುಗಳಲ್ಲಿ ಸತ್ಯ, ಅಹಿಂಸಾ, ಸೇವಾ ಮಾರ್ಗಗಳನ್ನು ಪ್ರಕಾಶಗೊಳಿಸಿದರು ಎಂದು ಕೊಪ್ಪಳದ ಬಹದ್ದೂರ ಬಂಡದ ಬಂಜಾರ ಪೀಠದ ಗುರು ಗೊಸಾಯಿ ಭಾವನವರು ಹೇಳಿದರು.
ಪಟ್ಟಣದ 3ನೇ ವಾರ್ಡಿನ ಜಕ್ಕಲಿ ರೋಡ್ ಆಶ್ರಯ ಕಾಲೋನಿಯಲ್ಲಿ ಸ್ಥಳೀಯ ಬಂಜಾರ(ಲಂಬಾಣಿ) ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸದ್ಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರ 284ನೇ ಜಯಂತಿಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು,
ಸೇವಾಲಾಲ್ ಮಹಾರಾಜರು ಸಮುದಾಯವನ್ನು ಸತ್ಯದ ಹಾದಿಯಲ್ಲಿ ಮುನ್ನಡೆಸಿದರು. ಎಲ್ಲಾ ಸಮಾಜದ ಏಳಿಗೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ಸಂತರು. ಸ್ವಂತಕ್ಕೆ ಆಸ್ತಿ ಮಾಡದೆ ಬಡವರ ಉದ್ಧಾರಕ್ಕಾಗಿ ಶ್ರಮಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದ ದಾರ್ಶನಿಕರು ಆಗಿದ್ದಾರೆ ಎಂದು ಹೇಳಿದರು. ಸಮಾಜದ ಉದ್ಧಾರಕ್ಕಾಗಿ ಜನ್ಮ ತಳೆದ ದೈವಿಪುರುಷರಾದ ಅವರು ಸತ್ಯ, ಅಹಿಂಸೆಯ ಮಾರ್ಗದಲ್ಲಿ ಸಾಗಿದರು.

ದೇಶದಲ್ಲಿ ಬಂಜಾರ ಸಮಾಜ ತ್ಯಾಗ, ಬಲಿದಾನಕ್ಕೆ ಹೆಸರಾಗಿದೆ. ಇತಿಹಾಸ ಕಾಲದಿಂದಲೂ ದೇಶಕ್ಕೆ ಅಪಾರವಾದ ಕೂಡುಗೆ ನೀಡುತ್ತಾ ಬಂದಿದೆ. ಇಂದಿನ ದಿನಮಾನದಲ್ಲಿ ಸಮಾಜದ ಬಾಂಧವರು ಬಂಜಾರ ಸಂಸ್ಕೃತಿ, ಆಚಾರ ವಿಚಾರ ಪದ್ದತಿಯನನು ಉಳಿಸಲು ಶ್ರಮಿಸಬೇಕು ಎಂದರು.
ಪಟ್ಟಣ ಪಂಚಾಯ್ತಿ ಚುನಾಯಿತ ಸದಸ್ಯ ಮಲ್ಲಿಕಾರ್ಜುನಗೌಡ ಭುಮನಗೌಡ್ರ ಮಾತನಾಡಿ, ಬಂಜಾರ ಜನಾಂಗವು ವಿಶಿಷ್ಟ ಭಾಷೆ ಹಾಗೂ ಸಂಸ್ಕೃತಿಯಿಂದ?ಗುರುತಿಸಿಕೊಂಡಿದೆ. ಸದಾ ಒಳಿತು ಬಯಸುವ ಬಂಜಾರ ಸಮುದಾಯದ ಚಿಂತನೆ ಅನುಕರಣೀಯ ಎಂದು ಹೇಳಿದರು. ಕಟ್ಟಿಗೆ ಹೊತ್ತು, ಅಡವಿ ಅರಣ್ಯಗಳಲ್ಲಿ, ಕೃಷಿ ಜಮೀನುಗಳಲ್ಲಿ, ದುಡಿಯುವ ಬುಡಕಟ್ಟು ಜನಾಂಗದ ಬಂಜಾರರು ಶ್ರಮಿಕರಾಗಿದ್ದಾರೆ. ಯಾವಾಗಲೂ ದುಡಿಮೆಗೆ ಹೆಚ್ಚಿನ ಮಹತ್ವ ನೀಡುವ ಕಾಯಕಯೋಗಿಗಳು ಮಕ್ಕಳ ಶಿಕ್ಷಣಕ್ಕೂ ಮಹತ್ವ ನೀಡಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

      ಈ ಸಂದರ್ಭದಲ್ಲಿ ಸೇವಾಲಾಲ್ ಮಹಾರಾಜರ ಜೀವನ ಚರಿತ್ರೆ, ಧರ್ಮ ಬೋಧನೆ ಕಾರ್ಯಕ್ರಮಗಳು ನಡೆದವು. ವಿಶ್ವ ಶಾಂತಿಗಾಗಿ ಭೋಗ್ (ಯಜ್ಞ) ಸಮರ್ಪಣೆ ಮಾಡಲಾಯಿತು. ನಂತರ ಸರ್ವರ ಏಳಿಗೆಗಾಗಿ ಬಂಜಾರ ಭಾಷೆಯಲ್ಲಿ ವಿಂತಿ (ಪ್ರಾರ್ಥನೆ) ಮಾಡಲಾಯಿತು. ಇದೆ ವೇಳೆ ಕೊಪ್ಪಳದ ಬಹದ್ದೂರ ಬಂಡದ ಬಂಜಾರ ಪೀಠದಲ್ಲಿ ಮಾರ್ಚ್ 6ಕ್ಕೆ ನಡೆಯುವ 16ನೇ ವರ್ಷದ ರಾಷ್ಟ್ರೀಯ ಬಂಜಾರ ಹೋಳಿ ಉತ್ಸವದ ಆಹ್ವಾನ ಪತ್ರಿಕೆಯನ್ನು ಬಿಡಗಡೆ ಮಾಡಲಾಯಿತು.

ಗಣೇಶ ಚವಾಣ, ಈಶಪ್ಪ ಮಾಳೋತ್ತರ, ವೀರೇಶ ಪಮ್ಮಾರ, ವೀರೇಶ ರಾಥೋಡ್, ಗುರುನಾಥ ಮಾಳೋತ್ತರ, ಪರಶುರಾಮ ರಾಥೋಡ್, ದೇವಕ್ಕ ರಾಥೋಡ್, ಧನಶಪ್ಪ ರಾಥೋಡ್, ಗೋಪಾಲ ರಾಥೋಡ್, ದೇವಪ್ಪ ಮಾಳೋತ್ತರ, ಕುಮಾರ ಪಮ್ಮಾರ, ಶಿವು ರಾಥೋಡ್, ನಾನಪ್ಪ ಮಾಳೋತ್ತರ, ಪರಸಪ್ಪ ಮಾಳೋತ್ತರ, ಕನಕಪ್ಪ ರಾಥೋಡ್, ಕೃಷ್ಣಪ್ಪ ರಾಥೋಡ್, ಠಾಕ್ರಪ್ಪ ಮಾಳೋತ್ತರ, ಲಕ್ಷ್ಮೀ ಲಮಾಣಿ, ಚನ್ನವೀರಯ್ಯ ಗುರುವಡೆಯರ, ವೀರುಪಾಕ್ಷಯ್ಯ ಹಿರೇಮಠ, ನಿಂಗಯ್ಯ ಸಿದ್ದನಗೌಡ್ರ, ಚನ್ನಯ್ಯಜ್ಜ ಹಿರೇಮಠ, ಶಿವಪ್ಪ ಹರ್ತಿ, ರೇಹಮಾನ್ ನದಾಫ್, ಗುಂಡಪ್ಪ ಮಳ್ಳಿ ಇದ್ದರು.