ದಾವಣಗೆರೆ.ಜೂ.೨೨; ಸರ್ವಾಂಗೀಣ ವಿಕಾಸ ಹಾಗೂ ಶ್ರೇಯೋಭಿವೃದ್ಧಿಗೆ ಯೋಗ ಸಹಕಾರಿ. ಆದ್ದರಿಂದ ಯೋಗಾಭ್ಯಾಸ ಮಾಡಿ ಅದರ ಪ್ರಯೋಜನ ಪಡೆದುಕೊಳ್ಳಿ ಎಂದು ದಾವಣಗೆರೆ ಆದರ್ಶ ಯೋಗ ಪ್ರತಿಷ್ಠಾನದ ಯೋಗಾಚಾರ್ಯ ರಾಘವೇಂದ್ರ ಗುರೂಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅವರು ಮಲೇಬೆನ್ನೂರು ಪಟ್ಟಣದ ಜಿಗಳಿ ರಸ್ತೆಯ ಒಡೆಯರ ಬಸಾಪುರ ಗ್ರಾಪಂ ವ್ಯಾಪ್ತಿಯ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸಂಸ್ಥೆಯ ಆವರಣದಲ್ಲಿ ಒಂದು ಸಪೋಟ ಗಿಡ ನೆಟ್ಟು ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಶಾರೀರಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ ಆಧ್ಯಾತ್ಮಿಕ ಉನ್ನತಿಗೆ ಪ್ರತಿ ನಿತ್ಯ ಯೋಗ ಸಾಧನೆ ಮಾಡಬೇಕು ಎಂದು ಗುರೂಜಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಪದ್ಮಾಸನ, ವಕ್ರಾಸನ, ಶೀರ್ಷಾಸನ, ಚಿನ್ಮಯ ಮುದ್ರೆ ಸೇರಿದಂತೆ ಇತರೆ ವಿವಿಧ ಯೋಗಾಸನಗಳ ಅಭ್ಯಾಸದಿಂದ ಶಾರೀರಿಕ ಹಾಗೂ ಮಾನಸಿಕ ಸಮತೋಲನ ಇಮ್ಮಡಿಗೊಂಡು ನೆನಪಿನ ಶಕ್ತಿ, ಏಕಾಗ್ರತೆ, ಸಾಧನೆಯ ಕ್ಷಮತೆ ಅಧಿಕಗೊಳ್ಳುತ್ತದೆ. ಅಷ್ಟೇ ಅಲ್ಲದೆ ಯೋಗದಿಂದ ಭೌತಿಕವಾಗಿ ಮತ್ತು ಮಾನಸಿಕವಾಗಿ ಸಕರಾತ್ಮಕ ಶಕ್ತಿಯ ಸಂಚಲನ ಉಂಟಾಗಿ ಶಾಂತಿ – ಸೌಹಾರ್ದದ ವಾತಾವರಣ ನಿರ್ಮಾಣವಾಗುತ್ತದೆ ಎಂದು ವಿವರಿಸಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಗುರೂಜಿಯವರು ಏಕಾಗ್ರತೆಗೆ ಯಾವ್ಯಾವ ಯೋಗಾಸನ, ಮುದ್ರೆಗಳನ್ನು ಅಳವಡಿಸಿಕೊಂಡರೆ ಸೂಕ್ತ ಹಾಗೂ ಯಾವ್ಯಾವ ಆಹಾರ ಸೇವಿಸಿದರೆ ಒಳಿತು ಎಂಬಿತ್ಯಾದಿ ಮಾಹಿತಿ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಜಿ.ಬಿ ಶಿವಾನಂದಪ್ಪ ಮಾತನಾಡಿ, ಯೋಗ ಮಾಡಿ ನಿರೋಗಿಗಳಾಗುವ ಜೊತೆ ಕುಟುಂಬಕ್ಕೂ, ಸಮಾಜಕ್ಕೂ ಕೊಡುಗೆ ನೀಡುವ ಸಾಮರ್ಥ್ಯ ಬೆಳೆಸಿಕೊಂಡು ಸಾಧಕರಾಗಿ ಜೀವನ ಸಾರ್ಥಕಪಡಿಸಿಕೊಳ್ಳಿ ಎಂದು ಸಂದೇಶ ನೀಡಿದರು .ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ, ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಎಸ್ ಶಶಿಧರ್ ವೇದಿಕೆಯಲ್ಲಿದ್ದರು. ಯೋಗ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಂಸ್ಥೆಯ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳ ಜೊತೆ ಯೋಗ ನೃತ್ಯ ಪ್ರದರ್ಶಿಸಿದರು. ಶಿಕ್ಷಕಿಯರಾದ ಶ್ರೀಮತಿ ಲಕ್ಷ್ಮೀ ಮತ್ತು ಶಾಂತಕುಮಾರಿ ನಿರೂಪಿಸಿದರು. ಗಂಗಾಧರ ಬಿ ಎಲ್ ನಿಟ್ಟೂರ್ ಅತಿಥಿ ಪರಿಚಯದೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಜಯಲಕ್ಷ್ಮಿ ವಂದನೆ ಸಲ್ಲಿಸಿದರು. ಚಂದನ , ಪ್ರತಿಭಾ, ಕವಿತಾ, ಸಂಗೀತ ಸೇರಿದಂತೆ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.