ಸರ್ವೇ ನಂ.೮೯೯/ಎ ಇನಾಮ್ ಜಮೀನು – ಸ್ವಾಧೀನಕ್ಕೆ ಒತ್ತಾಯ

ರಾಯಚೂರು.ಏ.೦೯- ನಗರದ ಬೋಳಮಾನ ದೊಡ್ಡಿ ರಸ್ತೆ ಸರ್ವೆ ನಂ.೮೯೯/ಎ ೧೪ ಎಕರೆ ಮೂಲತಃ ಇನಾಮ್ ಜಮೀನಾಗಿದ್ದು, ಇನಾಮ್ ರದ್ಧತಿ ೧೯೯೭ ರ ಕಾಯ್ದೆ ಕಲಂ ೪ ರನ್ವಯ ೧-೩-೧೯೭೪ ರಿಂದ ಸದರಿ ಜಮೀನು ಸರ್ಕಾರದ ಮಾಲೀಕತ್ವಕ್ಕೆ ಸೇರಿದ್ದು, ಜಿಲ್ಲಾಧಿಕಾರಿಗಳು ಇದನ್ನು ಸ್ವಾಧೀನಕ್ಕೆ ಪಡೆದುಕೊಂಡು ಪರಿಶಿಷ್ಟ ಜಾತಿ ಸಮುದಾಯಕ್ಕೆ ಹಂಚಿಕೆ ಮಾಡುವಂತೆ ಆಗ್ರಹಿಸಿದ ಡಾ.ಬಿ.ಆರ್.ಅಂಬೇಡ್ಕರ್ ಶೆಡ್ಯೂಲ್ ಕಾಸ್ಟ್ ಫೆಡರೇಷನ್ ರಾಜ್ಯಾಧ್ಯಕ್ಷರಾದ ಮಹೇಂದ್ರಕುಮಾರ ಮಿತ್ರಾ ಅವರು, ಇಲ್ಲದಿದ್ದರೇ, ಗುಲ್ಬರ್ಗಾ ನ್ಯಾಯಾಲಯದಲ್ಲಿ ದಾವೆ ಹೂಡಿ, ನ್ಯಾಯ ಕೋರುವುದಾಗಿ ಎಚ್ಚರಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಜಮೀನಿಗೆ ಸಂಬಂಧಿಸಿ ಪಾಣಿಯನ್ನು ನಕಲು ಮಾಡಲಾಗಿದೆ. ೧೯೮೧ ರಲ್ಲಿ ಯಂಕಮ್ಮ ಗಂಡ ರಾಘವೇಂದ್ರಾಚಾರ್ಯ ಇವರು ಫಾರಂ ನಂ.೧೧ ಭೂ ನ್ಯಾಯ ಮಂಡಳಿ ರಾಯಚೂರು ಇವರಿಗೆ ಸಲ್ಲಿಸಿ, ಸಾಗುವಳಿ ಮಂಜೂರಿ ಮಾಡಲು ಕೋರಲಾಗಿತ್ತು. ಈ ಅರ್ಜಿ ಆಧಾರದ ಮೇಲೆ ಭೂ ನ್ಯಾಯ ಮಂಡಳಿಯಲ್ಲಿ ವಿಚಾರಣೆ ಕೈಗೊಳ್ಳಲಾಗಿತ್ತು. ೧೯೭೨-೭೩ ಮೂರು ವರ್ಷಕ್ಕೆ ಇನಾಮಧಾರ ರಾಘವೇಂದ್ರ ಸಾಗುವಳಿ ಮಾಡಿದಂತೆ ಬರೆದುಕೊಳ್ಳಲಾಗಿದೆ. ಯಂಕಮ್ಮ ಗಂಡ ರಾಘವೇಂದ್ರಾಚಾರ ಇವರು ಭೂ ಮಂಜೂರು ಮಾಡಲು ತಯಾರಿಸಿದ ಪಹಣಿ ಖೊಟ್ಟಿಯಾಗಿರುತ್ತದೆ.
ತಹಶೀಲ್ದಾರ್ ರೆಕಾರ್ಡ್ ರೂಂನಲ್ಲಿ ೫ ವರ್ಷಕ್ಕೆ ಪಹಣಿ ಸಿದ್ಧಗೊಂಡಿರುತ್ತದೆ. ತಹಶೀಲ್ದಾರ್ ಹೊರತು ಪಡಿಸಿದರೇ ಯಾರು ಸಹ ಪಹಣಿ ನೀಡುವ ಅಧಿಕಾರ ಹೊಂದಿರುವುದಿಲ್ಲ. ಆದರೆ, ಗ್ರಾಮ ಲೆಕ್ಕಾಧಿಕಾರಿ ಪಹಣಿ ನೀಡುವ ಮೂಲಕ ವಂಚನೆ ಮಾಡಿದ್ದಾರೆ. ೧೪ ಎಕರೆ ಜಮೀನಿನ ಖೊಟ್ಟಿ ಮಾಲೀಕರಾದ ಲಕ್ಷ್ಮೀದೇವಿ ಗಂಡ ವೆಂಕೋಬಾಚಾರ ಮತ್ತು ಸಾಮಾಚಾರ ತಂದೆ ರಾಘವೇಂದ್ರಾಚಾರ ಇವರ ಹೆಸರಲ್ಲಿದ್ದು, ಈ ಇಬ್ಬರು ಸದರಿ ಆಸ್ತಿಯನ್ನು ೩೦೦ ನಿವೇಶನಗಳನ್ನಾಗಿ ಮಾರ್ಪಡಿಸಿ, ಶರಣಪ್ಪಗೌಡ ಹೆಗ್ಗಸನಹಳ್ಳಿ ಎಂಬುವವರಿಗೆ ಜಿಪಿಎ ಮಾಡಿಕೊಟ್ಟಿದ್ದರು.
೩೦x೪೦ ಅಳತೆಯ ನಿವೇಶನಗಳನ್ನು ನಗರಸಭೆ ದಾಖಲೆಗಳನ್ನು ನೋಡಿ ಖರೀದಿಸಲಾಗಿತ್ತು. ಲಕ್ಷ್ಮೀದೇವಿ ಗಂಡ ವೆಂಕೋಬಾಚಾರ ನಿಧನದ ನಂತರ ಅವರ ಮಕ್ಕಳಾದ ಮನೋಜ, ಕಿಶೋರ, ರಾಘವೇಂದ್ರ, ಮುಕುಂದ ಮತ್ತು ಸಾಮಾಚಾರ ತಂದೆ ರಾಘವೇಂದ್ರ ಸೇರಿಕೊಂಡು ೨೦೧೧ ರಲ್ಲಿ ತಹಶೀಲ್ದಾರರಿಗೆ ಅರ್ಜಿ ಕೊಟ್ಟು ಮ್ಯೂಟೇಷನ್ ಮಾಡಿಕೊಂಡಿದ್ದರು. ೨೦೧೪ ರಲ್ಲಿ ರವೀಂದ್ರ ಜಲ್ದಾರ್ ಅವರಿಗೆ ಮಾರಾಟ ಮಾಡಲಾಗಿದೆ. ಜಲ್ದಾರ್ ಅವರಿಗೆ ತಮ್ಮ ಹೆಸರಿಗೆ ವರ್ಗಾವಣೆ ನಂತರ ಈ ಲೇಔಟ್‌ಗೆ ಆದರ್ಶ ಕಾಲೋನಿಯೆಂದು ಹೆಸರು ನಾಮಕರಣ ಮಾಡಿ, ನಿವೇಶನ ಮಾರಾಟ ಮಾಡಿದ್ದಾರೆ.
ಉದ್ದೇಶಿತ ಜಮೀನು ಸರ್ಕಾರಿ ಜಮೀನಾಗಿದ್ದರಿಂದ ೩೦೦ ನಿವೇಶನಗಳನ್ನು ವಶಪಡಿಸಿಕೊಂಡು ಜಿಲ್ಲಾಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗುವಂತೆ ಕೋರಿದ್ದಾರೆ. ಶೇ.೯೦ ರಷ್ಟು ಪರಿಶಿಷ್ಟ ಜಾತಿ, ಹಿಂದುಳಿದ ವರ್ಗದವರೇ ಈ ನಿವೇಶನ ಖರೀದಿಸಿದ್ದು, ಇವರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕಮಲ್ ಆಂಜಿನೇಯ, ಸಿಎಂ ನಾರಾಯಣ ವಕೀಲ ಇದ್ದರು.