ಮುಧೋಳ,ಜೂ.4: ಅಭಿವೃದ್ಧಿಯೊಂದೇ ನಮಗೆ ಧ್ಯೇಯಮಂತ್ರವಾಗಬೇಕೆಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಮುಧೋಳ ನಗರಕ್ಕೆ ಅಬಕಾರಿ ಸಚಿವರಾಗಿ ಆರ್.ಬಿ.ತಿಮ್ಮಾಪೂರ ಅವರು ಪ್ರಪ್ರಥಮವಾಗಿ ಆಗಮಿಸಿದ ನಿಮಿತ್ಯವಾಗಿ ತಾಲೂಕಾ ಬ್ಲಾಕ್ ಕಾಂಗ್ರೆಸ್, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ಮುಧೋಳ ಮತಕ್ಷೇತ್ರದ ಜನತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನನಗೆ ಅತೀ ಹೆಚ್ಚಿನ ಪ್ರೀತಿ ಅಭಿಮಾನದಿಂದ ಬೆಂಬಲಿಸಿ ಮನೆ ಮಗನಿಗೆ ತಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ನನಗೆ ಆಶೀರ್ವದಿಸುವ ಮೂಲಕ ನನ್ನನ್ನು ಶಾಸಕನನ್ನಾಗಿ ಆಶೀರ್ವದಿಸಿದ್ದಾರೆ. ಅವರೆಲ್ಲರ ಪ್ರೀತಿ, ಅಭಿಮಾನದ ಮೂಲಕ ಕಾಂಗ್ರೆಸ್ ಪಕ್ಷ ಸಚಿವನನ್ನಾಗಿ ಮಾಡಿದ್ದಾರೆ. ಇನ್ನು ಮುಂದೆ ಕ್ಷೇತ್ರದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ವಾಂಗೀಣ ಅಭಿವೃದ್ಧಿಯೊಂದೇ ನನ್ನ ಗುರಿಯಾಗಿದೆ. ಇದಕ್ಕೆಲ್ಲಾ ನನ್ನ ಅಭಿಮಾನಿಗಳು, ಕ್ಷೇತ್ರದ ಜನತೆ ಸಂಪೂರ್ಣವಾಗಿ ಬೆಂಬಲ ನೀಡುವ ಮೂಲಕ ನನಗೆ ಅಭಿವೃದ್ಧಿ ಮಾಡುವ ಕೆಲಸದಲ್ಲಿ ಕೈಜೋಡಿಸಬೇಕೆಂದು ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರೆಪ್ಪ ಸಾಂಗ್ಲೀಕರ, ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ನಗರ ಘಟಕದ ಅಧ್ಯಕ್ಷ ರಘುನಾಥ ಮೋಕಾಶಿ ಸೇರಿದಂತೆ ನಗರಸಭೆ ಸದಸ್ಯರು, ಕಾಂಗ್ರೆಸ್ ಪ್ರಮುಖರು, ಧುರೀಣರು ಹಾಗೂ ಕಾಂಗ್ರೆಸ್ ಅಭಿಮಾನಿಗಳು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಇದಕ್ಕೂ ಮೊದಲು ರೈಲು ದುರಂತದಲ್ಲಿ ಮಡಿದ ಸಾರ್ವಜನಿಕರ ಆತ್ಮಶಾಂತಿ ಕೋರಿ ಮೌನ ಆಚರಿಸಲಾಯಿತು.