ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಜನರ ವಿಶ್ವಾಸ ಗಳಿಸಿದ ಬಿಜೆಪಿ ಸರ್ಕಾರ: ಬಳ್ಳಾರಿ

ಬ್ಯಾಡಗಿ, ನ 23: ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ರೂಗಳ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಸಮಗ್ರ ಅಭಿವೃದ್ದಿಗೆ ಪೂರಕವಾಗುವಂತೆ ಆದ್ಯತೆ ನೀಡಿವೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ಅವರು ತಮ್ಮ ಬ್ಯಾಡಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ರಾಣೆಬೆನ್ನೂರು ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಗಂಗೆ ಕಾಮಗಾರಿಗೆ ಭೂಮಿಪೂಜೆ, ಕೆರೆಮಲ್ಲಾಪುರ ಗ್ರಾಮದಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟನೆ, ಗುಡಿಹೊನ್ನತ್ತಿ ಗ್ರಾಮದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರದ ಕಂಪೌಂಡ, ವಸತಿ ಗೃಹಗಳ ದುರಸ್ಥಿ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಅಂಗವಿಕಲರ ಸ್ನೇಹ ಮಳಿಗೆ ಉದ್ಘಾಟನೆ ಹಾಗೂ ಹೊಸಹೊನ್ನತ್ತಿ ಗ್ರಾಮದಲ್ಲಿ ಹೊಸಹೊನ್ನತ್ತಿ- ಹನುಮಾಪುರ-ಯಲ್ಲಾಪುರ ಕೂಡುರಸ್ತೆ ಮತ್ತು ಹನುಮಾಪುರ-ಯಲ್ಲಾಪುರ ಕೂಡುರಸ್ತೆಯಿಂದ ಬುಡಪನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ ಅತಿವೃಷ್ಠಿ ಮತ್ತು ಕೋವಿಡ್ ಸಂಕಷ್ಟದಲ್ಲಿಯೂ ರಾಜ್ಯದ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೂ ಸಹ ಹಿನ್ನಡೆ ಮಾಡದೇ ವಿವಿಧ ಕ್ಷೇತ್ರಗಳಲ್ಲಿ ಕೋಟ್ಯಾಂತರ ರೂಗಳನ್ನು ವಿನಿಯೋಗಿಸಿ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಜನರ ವಿಶ್ವಾಸವನ್ನು ಬಿಜೆಪಿ ಸರ್ಕಾರ ಗಳಿಸಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಡಿಪಿಆರ್ ಸಲ್ಲಿಸಲಾಗಿದೆ. ಅಲ್ಲದೇ ರಾಜ್ಯದಾದ್ಯಂತ ವಿವೇಕ್ ಯೋಜನೆಯಡಿ ಎಂಟು ಸಾವಿರ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುವ ಮೂಲಕ ಬಿಜೆಪಿ ಸರ್ಕಾರ ಐತಿಹಾಸಿಕ ಮಟ್ಟದಲ್ಲಿ ಹೆಜ್ಜೆ ಹಾಕಿದೆ. ಅತಿವೃಷ್ಠಿಯಿಂದ ಮನೆ ಹಾನಿಗೊಳಗಾಗಿರುವ ಕುಟುಂಬಗಳಿಗೆ 50ಸಾವಿರದಿಂದ 5ಲಕ್ಷ ರೂಗಳವರೆಗೆ ಪರಿಹಾರ ನೀಡುವ ಮೂಲಕ ಮನೆಗಳ ದುರಸ್ತಿ ಸೇರಿದಂತೆ ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಹೇಮಾವತಿ ಉಪ್ಪಿನ ವಹಿಸಿದ್ದರು. ಮುಖಂಡರಾದ ತಿರಕಪ್ಪ ಬುಡುಪನಹಳ್ಳಿ, ಕರಬಸಪ್ಪ ನಿಟ್ಟೂರ, ರುದ್ರಪ್ಪ ಮೂಲಿಮನಿ, ಸಂತೋಷ ಉಪ್ಪಿನ, ಎಇಇ ರಮೇಶ ಹೂಗಾರ, ಇಂಜನೀಯರಗಳಾದ ಹನುಮಂತಪ್ಪ, ಪ್ರಮೋದ್, ಪಿಡಿಓ ರಾಮಲಿಂಗೇಶ, ಗ್ರಾಪಂ ಸದಸ್ಯರು ಮತ್ತು ಗುತ್ತಿಗೆದಾರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.