ಸರ್ವರ ಸಹಕಾರದಿಂದ ಗ್ರಾಮಾಭಿವೃದ್ಧಿ ಸಾಧ್ಯ: ಮಲ್ಲಪ್ಪ ಗೌಡಾ

ಔರಾದ : ಡಿ.3:ಸಾಕಷ್ಟು ಸಂಪನ್ಮೂಲಗಳನ್ನು ಸಮರ್ಪಕವಾಗಿ ಸದುಪಯೋಗ ಮಾಡಿಕೊಂಡು ಗ್ರಾಪಂ ಸದಸ್ಯರು ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಮಾಡಿದರೇ ಗ್ರಾಮಗಳ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದು ರಿಲಾಯನ್ಸ್ ಫೌಂಡೇಷನ್ ಸಮುದಾಯ ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ಗೌಡಾ ತಿಳಿಸಿದರು.

ಬುಧವಾರ ತಾಲೂಕಿನ ಬೆಳಕುಣಿ(ಚೌ) ಗ್ರಾಮದ ಗ್ರಾಪಂ ಕಚೇರಿಯಲ್ಲಿ ಗ್ರಾಪಂ ಸದಸ್ಯರಿಗೆ ರಿಲಾಯನ್ಸ್ ಫೌಂಡೇಷನ್ ಬೀದರ್ ವತಿಯಿಂದ ಗ್ರಾಮಾಭಿವೃದ್ದಿಯಲ್ಲಿ ಗ್ರಾಪಂ ಸದಸ್ಯರ ಮಹತ್ವದ ಪಾತ್ರದ ಬಗ್ಗೆ ವಿಶೇಷ ಮಾಹಿತಿ ನೀಡಿ ಮಾತನಾಡಿದ ಅವರು, ಒಂದು ಗ್ರಾಮ ಹಾಗು ಗ್ರಾಪಂ ಸಮಗ್ರ ಅಭಿವೃದ್ದಿ ಆಗಬೇಕಾದರೇ ಸಾರ್ವಜನಿಕರು ಚುನಾವಣೆಗಳಲ್ಲಿ ಉತ್ತಮವಾದ ಶಿಕ್ಷಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಆಯ್ಕೆಯಾದ ಸದಸ್ಯರು ಗ್ರಾಮಾಭಿವೃದ್ದಿಗೆ ತನ್ನ ಕೈಲಾದಷ್ಟು ಅಳಿಲು ಸೇವೆ ಮಾಡಿ, ಗ್ರಾಮದ ಸಮಗ್ರ ಅಭಿವೃದ್ದಿಯ ಕನಸು ಕಾಣಬೇಕು. ಗ್ರಾಪಂ ಸದಸ್ಯರಾದವರು ಮೋದಲಿಗೆ ಗ್ರಾಪಂ ಅಂದರೇನು? ಅದರ ಸ್ವರೂಪವೇನು? ಗ್ರಾಪಂಗೆ ಬರುವ ಅನುದಾನ ಮತ್ತು ಬಳಕೆವೆಷ್ಟು? ಪ್ರತಿ ಹಳ್ಳಿಗೆ ಸಿಗುವ ಅನುದಾನವೆಷ್ಟು? ಪ್ರತಿವರ್ಷ ಕ್ರೀಯಾಯೋಜನೆ ರೂಪಿಸುವುದು ಹೇಗೆ ಅನ್ನುವ ಹತ್ತು ಹಲವಾರು ಸಮರ್ಪಕ ಮಾಹಿತಿಗಳನ್ನು ಕಲಿತು, ನಂತರ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಸದಸ್ಯ ನಜೀರ್ ಅಹಮದ್ ಮಾತನಾಡಿ, ರಿಲಾಯನ್ಸ್ ಫೌಂಡೇಷನ್ 2013ರಿಂದ ಬೀದರ್ ಜಿಲ್ಲೆಯಲ್ಲಿ ಹಲವಾರು ಗ್ರಾಮಗಳಲ್ಲಿ ರೈತರ ಸವಾರ್ಂಗೀಣ ಅಭಿವೃದ್ಧಿಗೆ ಶ್ರಮಿಸಿರುವುದು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿಯೂ ಕೂಡಾ ಎಲ್ಲ ರೈತರುಗಳು ಉತ್ತಮ ಕಾರ್ಯಗಳನ್ನು ನೀರೀಕ್ಷಿಸುತ್ತಿದ್ದೆವೆ ಎಂದರು.

ಇದೇ ವೇಳೆ ಬೀದರ್ ಕೃಷಿ ಉತ್ಪಾದಕರ ಕಂಪನಿಯ ಸಹಯೋಗದಲ್ಲಿ ರೈತರುಗಳು ಬೆಳೆದ ಸೋಯಾಬೀನ್ ಧಾನ್ಯಗಳನ್ನು ಯಾವುದೇ ದಳ್ಳಾಳಿಗಳ ಮೋಸವಿಲ್ಲದೇ ನೇರವಾಗಿ ಖರೀದಿಸುವ ಬಗ್ಗೆ ತಿಳಿಸಲಾಯಿತು. ಪಿಡಿಒ ನರಸಿಂಗ್ ಮಾನೆ, ಅಮರ್, ಗ್ರಾಪಂ ಸದಸ್ಯ ನಜೀರ್ ಅಹಮದ್, ಶಂಕರೆಪ್ಪ, ಶರಣಪ್ಪ , ರವಿ ವಲ್ಲಾಪುರೆ, ಸೇರಿದಂತೆ ಇನ್ನಿತರರು ಇದ್ದರು.