ಸರ್ವರ ಒಳಿತನ್ನು ಬಯಸುವ ಲಿಂಗಾಯತ ಧರ್ಮ ವಿಶ್ವಮಾನ್ಯ

ಕಲಬುರಗಿ:ಜ.15: ವಿಶ್ವಗುರು ಬಸವಣ್ಣನವರು ಶತ-ಶತಮಾನಗಳಿಂದಲೂ ಶೋಷಣೆಗೆ ಒಳಗಾಗಿ, ಮೂಕ ರೋಧನೆಯನ್ನು ಅನುಭವಿಸುತ್ತಿದ್ದ ದೀನ, ದಲಿತರು, ಶೋಷಿತರು, ಮಹಿಳೆಯರು, ನಿರ್ಗತಿಕರಿಗೆ ಧ್ವನಿಯಾಗಿ, ಅವರಿಗೆ ಸರ್ವ ನ್ಯಾಯವನ್ನು ಒದಗಿಸಿಕೊಟ್ಟಿದ್ದಾರೆ. ಸಮಾನತೆ ಕುರುಹಾದ ಇಷ್ಟಲಿಂಗದ ಪ್ರವರ್ತಕರಾಗಿ ವೈಜ್ಞಾನಿಕ ತಳಹದಿಯ ಮೇಲೆ ಲಿಂಗಾಯತ ಧರ್ಮವನ್ನು ಸ್ಥಾಪಿಸಿ, ಸರ್ವರ ಒಳಿತನ್ನು ಬಯಸುವ ಲಿಂಗಾಯತ ಧರ್ಮ ವಿಶ್ವಮಾನ್ಯವಾಗಿದೆ ಎಂದು ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

     ನಗರದ ಶಹಾಬಜಾರ ಮಹಾದೇವ ನಗರದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಶುಕ್ರವಾರ ಏರ್ಪಡಿಲಾಗಿದ್ದ 'ಲಿಂಗಾಯತ ಧರ್ಮದ 867ನೇ ಸಂಸ್ಥಾಪನಾ ದಿನಾಚರಣೆ'ಯನ್ನು ಮಹಾತ್ಮ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

      ಆಳಂದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, 'ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಎಂಬ ತತ್ವದಡಿಯಲ್ಲಿ ಜಗತ್ತಿನ ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸಿದ ಬಸವಣ್ಣನವರು ವಿಶ್ವಗುರುವಾಗಿದ್ದಾರೆ. ಅವರು ನೂರಾರು ವರ್ಷಗಳ ಹಿಂದೆಯೇ ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಇಂದು ಸಂವಿಧಾನಾತ್ಮಕ ಮಾನ್ಯತೆ ದೊರೆಯದಿರುವುದು ದೊಡ್ಡ ದುರ್ಧೈವದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

      ಕಾರ್ಯಕ್ರಮದಲ್ಲಿ ಪ್ರಮುಖರಾದ ಚನ್ನಬಸಪ್ಪ ಗಾರಂಪಳ್ಳಿ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಮಂಗಾಣೆ, ದೇವಯ್ಯ ಗುತ್ತೇದಾರ, ಪರಮೇಶ್ವರ ದೇಸಾಯಿ, ಮಹಾಲಿಂಗಪ್ಪ ಮೂಲಗೆ, ಅರುಣಕುಮಾರ ಪೋಚಾಳ್, ಉಮಾಕಾಂತ ಪಾಟೀಲ, ಆದಿತ್ಯ ಸಿ.ಗಾರಂಪಳ್ಳಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.