ಸಂಜೆವಾಣಿ ವಾರ್ತೆ
ಸಂಡೂರು: ಜು: 22 ಸಂಡೂರು ತಾಲೂಕಿನ ಪಟ್ಟಣವನ್ನೊಳಗೊಂಡಂತೆ ಹಲವಾರು ಗ್ರಾಮೀಣಭಾಗದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಯ ಕಾರ್ಯ ಭರದಿಂದ ಸಾಗಿದ್ದರೂ, ಸರ್ವರ್ ಸಮಸ್ಯೆಯಿಂದ ನೊಂದಣಿ ಕಾರ್ಯ ಸಂಪೂರ್ಣವಾಗಿ ಹಿನ್ನಡೆಯಾಗಲು ಕಾರವಣವಾಗಿದೆ. ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ಒಂದು ಕೇಂದ್ರದಲ್ಲಿ 25 ಜನರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಕೇಂದ್ರದಲ್ಲಿ ಸರತಿಸಾಲಿನಲ್ಲಿ ನಿಲ್ಲಲು ಅಗಮಿಸಿದ್ದರು. ಸರ್ವರ್ ಸಮಸ್ಯೆಯಿಂದ ಒಂದು ಅರ್ಜಿ ಸಲ್ಲಿಕೆಯಾಗಿರಲಿಲ್ಲ, ಸಂಜೆಯಾಗುತ್ತಿದ್ದಂತೆ ಸರ್ವರ್ ಫ್ರೀ ಆದರೆ ನೊಂದಣಿ ಮಾಡಲಾಗುವುದು ಎಂದು ಬಂಡ್ರಿ ಗ್ರಾಮದ ಕೇಂದ್ರ ನೊಂದಣಿ ಅಧಿಕಾರಿ ಮಲ್ಲಿಕಾರ್ಜುನರವರು ಗೃಹಲಕ್ಷ್ಮೀ ಯೋಜನೆ ಅಡಿ ನೊಂದಣಿ ಮಾಡಲು ಬಂದ ಮಹಿಳೆಯರಿಗೆ ತಿಳಿಸಿದರು. ಸಂಡೂರು ತಾಲೂಕಿನ ಬಂಡ್ರಿ ಗ್ರಾಮವೊಂದೇ ಈ ಸಮಸ್ಯೆಯಿಂದ ದೂರವಿದೆ ಎನ್ನುವುದರ ಬದಲು ಸಂಡೂರು ತಾಲೂಕಿನ ಹಲವಾರು ಗ್ರಾಮೀಣ ಭಾಗದಲ್ಲಿ ಇದೇ ಸಮಸ್ಯೆ ಕೇಳಿಬರುತ್ತಿದೆ.
ಇನ್ನೊಂದು ಮುಖ್ಯ ಅಂಶವೆಂದರೆ ಸಾರ್ವಜನಿಕರು ತಮ್ಮ ಮೊಬೈಲುಗಳಿಗೆ ಬಂದಿರುವ ದಿನಾಂಕ ಸಮಯ ಮತ್ತು ಸೂಚಿತ ಕೇಂದ್ರಗಳಿಗೆ ತೆರಳಿನೊಂದಣಿ ಮಾಡಿಸಲು ಮುಂದಾಗಿದ್ದಾರೆ. ಆದರೆ ಸರ್ವರ್ ಸಮಸ್ಯೆ ತೊಡಕಾದರೂ ಗೃಹಲಕ್ಷ್ಮೀ ಯೋಜನೆಯಡಿಯ ನೊಂದಣಿ ಕಾರ್ಯಕ್ಕೆ ಮುಂದಾಗಿರುವುದು ಸಂತಸದ ವಿಷಯವಾಗಿದೆ. ಸರ್ಕಾರದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಲು ಮಹಿಳೆಯರಲ್ಲಿದ ಸಾರ್ವಜನಿಕರು ಮುಂದಾಗಿದ್ದಾರೆ.