ಸರ್ವರಿಗೂ ಸೂರು ಸೋಮಣ್ಣ ಸಂಕಲ್ಪ

ಬೆಂಗಳೂರು, ಸೆ. ೨೬- ರಾಜ್ಯದ ಸರ್ವರಿಗೂ ಸೂರು ಒದಗಿಸುವುದು ಸರ್ಕಾರದ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಸಾಕಷ್ಟು ವಸತಿ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ರಾಜ್ಯ ಗೃಹ ಮಂಡಳಿ ವತಿಯಿಂದ ಬೆಂಗಳೂರು-ಆನೇಕಲ್ ಮುಖ್ಯ ರಸ್ತೆಯಲ್ಲಿ ನಿರ್ಮಿಸಲಾಗಿರುವ ಸೂರ್ಯನಗರ ೧ನೇ ಹಂತದ ಸೂರ್ಯ ಎಲಿಗೆನ್ಸ್ ಬಹುಮಹಡಿ ವಸತಿ ಸಮುಚ್ಛಯವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ವಸತಿ ಸಚಿವನಾಗಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಸೂರು ಕಲ್ಪಿಸುವ ಸಂಕಲ್ಪ ತಮ್ಮದು ಎಂದರು.
ನಗರೀಕರಣ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ವಸತಿ ಒದಗಿಸುವುದು ಸರ್ಕಾರದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಸೂರ್ಯ ಎಲಿಗೆನ್ಸ್ ಯೋಜನೆ ಮಾದರಿಯಾಗಿದೆ ಎಂದರು.
ಬೆಂಗಳೂರಿನಲ್ಲಿ ತಮ್ಮದೊಂದು ಸೂರು ಹೊಂದಬೇಕು ಎನ್ನುವುದು ಜನರ ಮಹದಾಸೆ. ಅದಕ್ಕಾಗಿಯೇ ಸೂರ್ಯ ನಗರ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.
ಗೃಹ ಮಂಡಳಿಯ ಎಲ್ಲಾ ಯೋಜನೆಗಳು ಜನಸಾಮಾನ್ಯರಿಗೆ ತಲುಪಬೇಕು. ಆ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಸಮಯಕ್ಕೆ ಸರಿಯಾಗಿ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲೂ ಗಮನ ಹರಿಸಿದ್ದೇವೆ ಎಂದು ಅವರು ತಿಳಿಸಿದರು.
ಸೂರ್ಯ ಎಲಿಗೆನ್ಸ್ ವಸತಿ ಸಮುಚ್ಛಯದ ಹಂಚಿಕೆಯನ್ನು ಸದ್ಯದಲ್ಲೇ ಮಾಡಲಾಗುವುದು. ಸ್ಥಳೀಯರಿಗೆ ಆದ್ಯತೆ ನೀಡುವುದಾಗಿಯೂ ಅವರು ಹೇಳಿದರು.
ಇಡೀ ಏಷ್ಯಾದಲ್ಲೇ ಸೂರ್ಯ ನಗರ ಅತಿ ದೊಡ್ಡ ವಸತಿ ಯೋಜನೆಯಾಗಿದೆ. ೪ ಹಂತಗಳಲ್ಲಿ ಸೂರ್ಯ ನಗರ ಟೌನ್‌ಶಿಪ್ ನಿರ್ಮಾಣವಾಗುತ್ತಿದೆ. ಸೂರು ಇಲ್ಲದವರ ಸೂರು ಹೊಂದುವ ಆಶೋತ್ತರವನ್ನು ಈಡೇರಿಸುವುದು ವಸತಿ ಯೋಜನೆಗಳ ಗುರಿ ಎಂದರು.
ಸೂರ್ಯ ಎಲಿಗೆನ್ಸಿಯಲ್ಲಿ ಕಸ ವಿಲೇವಾರಿಯನ್ನು ಏಜೆನ್ಸಿಗಳಿಗೆ ನೀಡಲಾಗಿದೆ. ಸರಿಯಾಗಿ ಕಾರ್ಯನಿರ್ವಹಿಸುವಂತೆಯೂ ಸೂಚಿಸಿದ್ದೇವೆ. ಕಸ ವಿಲೇವಾರಿ ಸಮರ್ಪಕವಾಗಿ ಆಗದಿದ್ದರೆ ಕ್ರಮ ನಿಶ್ಚಿತ ಎಂದರು.
ಈ ಸೂರ್ಯ ಎಲಿಗೆನ್ಸಿ ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, ವಾಸಿಸಲು ಎಲ್ಲ ರೀತಿಯ ಅನುಕೂಲಗಳು ಇದೆ ಎಂದರು.
ಡಿ.ಕೆ. ಸುರೇಶ್ ಶ್ಲಾಘನೆ
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಿ.ಕೆ. ಸುರೇಶ್ ಅವರು, ಕರ್ನಾಟಕ ಗೃಹ ಮಂಡಳಿ ವತಿಯಿಂದ ಸುಸಜ್ಜಿತ ಬಡಾವಣೆ ಸಿದ್ದವಾಗಿದೆ. ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಸೂರು ಒದಗಿಸುವ ಸೂರ್ಯ ಎಲಿಗೆನ್ಸ್ ಯೋಜನೆ ಉತ್ತಮ ಯೋಜನೆಯಾಗಿದೆ ಶ್ಲಾಘಿಸಿದರು.
ಸಮಾರಂಭದಲ್ಲಿ ಶಾಸಕ ಬಿ. ಶಿವಣ್ಣ, ಸರ್ಕಾರದ ವಸತಿ ಇಲಾಖೆ ಕಾರ್ಯದರ್ಶಿ ಮನೋಜ್‌ಕುಮಾರ್ ಮೀನಾ, ಗೃಹ ಮಂಡಳಿ ಆಯುಕ್ತ ಬಿ.ಎಸ್. ರಮೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.