ಸರ್ವರಿಗೂ ಸಂವಿಧಾನ ನಾಟಕ ಅದ್ಭುತ: ಕುಲಪತಿ ಪ್ರೊ. ಅಲಗವಾಡಿ

ಕಲಬುರಗಿ:ಏ.7:ಸರ್ವರಿಗೂ ಸಂವಿಧಾನ ನಾಟಕವು ಒಂದು ಅದ್ಭುತ ಪ್ರಯೋಗವಾಗಿದೆ ಎಂದು ಕರ್ನಾಟಕ ಕೇಂಧ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ವಿ. ಅಲಗವಾಡಿ ಅವರು ಹೇಳಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಕಲಬುರ್ಗಿ ರಂಗಾಯಣದ ಸಹಯೋಗದೊಂದಿಗೆ ಪ್ರಸ್ತುತಪಡಿಸಿದ ಸರ್ವರಿಗೂ ಸಂವಿಧಾನ ಎಂಬ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಮ್ಮ ಕೇಂದ್ರೀಯ ವಿಶ್ವವಿದ್ಯಾಲಯ ಒಂದು ಐತಿಹಾಸಿಕ ಘಳಿಗೆಗೆ ಸಾಕ್ಷಿಯಾಗುತ್ತಿದೆ ಎಂದು ನಾನು ಭಾವಿಸಿದ್ದೇನೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ರಂಗಾಯಣದ ಜೊತೆಗೂಡಿ ಇಂತಹ ಅದ್ಭುತವಾದ ವಿಷಯದ ಬಗ್ಗೆ ನಾಟಕವೊಂದನ್ನು ರಚಿಸಿದೆ. ಸಂವಿಧಾನವನ್ನು ಅರಿಯುವುದು ಮತ್ತು ಅದನ್ನು ಅನುಷ್ಠಾನ ಮಾಡುವುದು ವ್ಯಕ್ತಗತ ಹಾಗೂ ಸಾಮೂಹಿಕ. ಅದನ್ನು ಜನಸಾಮ್ಯಾನರಿಗೆ ಅರಿಯುವಂತೆ ಮಾಡಿದರೆ ಈ ನಾಟಕದ ಗುರಿತಲುಪಿದಂತೆ. ಸಂವಿಧಾನದ ಎಲ್ಲ ಅಂಶಗಳಿಗೆ ಈ ನಾಟಕ ಹೇಗೆ ಒತ್ತು ನೀಡುತ್ತದೆ ಎಂಬುದು ಈ ನಾಟಕದ ಪ್ರಾಮುಖ್ಯತೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಗುಲಬರ್ಗಾ ವಿಶ್ವವಿದ್ಯಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅವರು ಮಾತನಾಡಿ, ಭಾರತೀಯ ಪ್ರಜೆಯೆಂದು ಹೇಳಲು ನಾವು ಹೆಮ್ಮೆ ಪಡುವುದು ನಮ್ಮ ಸಂವಿಧಾನದಿಂದ. ಅದರ ನಿರ್ಮಾಣ ಮಾಡಿದವರಿಗೆ ನಾವು ಯಾವತ್ತಿಗೂ ಚಿರಋಣಿಯಾಗಿರಬೇಕು. ಸಮಾನ ಹಕ್ಕು ಸಂವಿಧಾನದ ಮಹತ್ವ ಸಾರುತ್ತದೆ. ಸಂವಿಧಾನ ಇಡೀ ಭಾರತೀಯರಿಗೆ ಮಾಡಿರುವಂತದ್ದು ಯಾವುದೇ ಒಂದು ಸಮುದಾಯಕ್ಕಾಗಿ ಅಲ್ಲ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಸಂವಿಧಾನದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮೊದಲ ಹೆಜ್ಜೆಯನ್ನು ಇಟ್ಟಿದೆ. ಇದಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಇನ್ನೊರ್ವ ಮುಖ್ಯ ಅತಿಥಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ್ ಡೋಣೂರ್ ಅವರು ಮಾತನಾಡಿ, ಸರ್ವರಿಗೂ ಸಂವಿಧಾನ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿ ಬರೆದಿಲ್ಲ. ಬದಲಾಗಿ ಎಲ್ಲ ಭಾರತೀಯದ ಹಿತಾಸಕ್ತಿ ಇದರಲ್ಲಿ ಅಡಗಿದೆ. ನಾವು ಆಡುವ ಮಾತು, ಬರಹ ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಅದರಂತೆಯೇ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ವ್ಯಕ್ತಿತ್ವ ಸಂವಿಧಾನದ ಮೂಲಕ ವ್ಯಕ್ತವಾಗಿದೆ. ನಾವು ಯಾವತ್ತು ಸಂವಿಧಾನಕ್ಕೆ ಬದ್ಧವಾಗಿ ಕೆಲಸ ಮಾಡುತ್ತೇವೆಯೋ ಅಂದು ಅದಕ್ಕೆ ಅರ್ಥ ಬರಲಿದೆ. ಇಂದು ಯಾರು ಸಂವಿಧಾನಕ್ಕೆ ಪೂರಕವಾಗಿ ಕೆಲಸ ಮಾಡುವವರನ್ನು ಪ್ರಶಂಸಿಸುವ ಬದಲಾಗಿ ಟೀಕೆ ಮಾಡಲಾಗುತ್ತಿದೆ, ಈ ನಡೆ ಬದಲಾಗಬೇಕು. ನನ್ನ ಪ್ರಕಾರ ಇಡಿಯ ಭಾರತೀಯ ಸಾಹಿತ್ಯದಲ್ಲಿ ಸಂವಿಧಾನದ ಬಗ್ಗೆ ನಾಟಕ ಬಂದಿರುವುದು ಇದೇ ಮೊದಲು. ಈ ಕೀರ್ತಿ ನಾಟಕದ ಕರ್ತೃ ಅಪ್ಪಗೆರೆ ಸೋಮಶೇಖರ್ ಅವರಿಗೆ ಸಲ್ಲುತ್ತದೆ ಎಂದರು.
ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರು ಅವರು ಮಾತನಾಡಿ, ಸರ್ವರಿಗೂ ಸಂವಿಧಾನ ನಮ್ಮ ರಂಗಾಯಣದ ಕನಸಿನ ಕೂಸು. ಇದನ್ನು ಅಪ್ಪಗೆರೆ ಸೋಮಶೇಖರ್ ಅವರು ಚೆನ್ನಾಗಿ ರಚಿಸಿ ಕೊಟ್ಟಿದ್ದಾರೆ. ಯಾರೂ ಮುಟ್ಟದ ವಿಷಯನ್ನು ಕಲಬುರಗಿಯ ರಂಗಾಯಣ ಕೈಗೆತ್ತಿಕೊಂಡಿದೆ ಹಾಗೂ ಅದರಲ್ಲಿ ಯಶಸ್ವಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಪ್ರಭಾಕರ್ ಜೋಶಿ ಅವರು ಮಾತನಾಡಿ, ರಂಗಾಯಣದ ಮಹತ್ವಾಕಾಂಕ್ಷೆ ಯೋಜನೆಯಾದ ಸಂವಿಧಾನದ ಬಗೆಗಿನ ನಾಟಕವನ್ನು, ಕರ್ನಾಟಕದ ಯಾವುದೇ ರಂಗಾಯಣ ಕೈಗೆತ್ತಿಕೊಳ್ಳಲಿಲ್ಲ. ಆದರೆ ನಾವು ಕೈಹೆತ್ತಿಕೊಂಡು ಅದು ಯಶಸ್ವಿಯಾಗಲು ಸಂಪೂರ್ಣ ಸಹಕಾರ ನೀಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಧನ್ಯವಾದಗಳು. ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಈ ನಾಟಕ ಸಿದ್ಧಪಡಿಸಿದ್ದು ಬಹಳ ಸಾಂಧರ್ಭಿಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಟಕದ ನಿರ್ದೇಶಕ ಅನಿಲ್ ರೇವೂರ್, ನಾಟಕ ತಂಡದ ಸಂಚಾಲಕ ಹರಿಕೃಷ್ಣ ಎಸ್. ಬಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕೋವಿಡ್-19ರ ನಿಯಮ ಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗಿತ್ತು.