ಸರ್ವರಲ್ಲಿ ಸಮಾನತೆ ಬಯಸಿದವರು ಅಂಬೇಡ್ಕರ್

ದೇವದುರ್ಗ.ಡಿ.೨೫- ಹಲವಾರು ಅಸಮಾನತೆಗಳಿಂದ ಕೂಡಿದ ಭಾರತ ದೇಶದಲ್ಲಿ ಪ್ರತಿಯೊಬ್ಬರು ಜಾತಿ, ಧರ್ಮ, ಲಿಂಗಭೇದ ವಿಲ್ಲದೆ ಸರ್ವರೂ ಸಮಾನತೆಯಿಂದ ಬದುಕಬೇಕೆಂಬ ಆಶಯದಿಂದ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಬರೆದಿದ್ದಾರೆ ಎಂದು ಸಿರವಾರದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಭು ಮರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ದೇವದುರ್ಗ ತಾಲೂಕಿನ ರಾಮದುರ್ಗ ಗ್ರಾಮದ ಗಂಗಮ್ಮ-ಗುಂಡಪ್ಪ ಭಜಂತ್ರಿರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ, ೭೮ ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು.
ಬಾಬಾಸಾಹೇಬ್ ಅಂಬೇಡ್ಕರ್ ರವರು ಸರಕಾರಿ ನೌಕರಿ ಮಾಡುವ ಪ್ರತಿಯೊಬ್ಬ ಮಹಿಳೆಯರಿಗೂ ಹೆರಿಗೆ ರಜೆ, ಪುರುಷರಷ್ಟೇ ಸಮಾನ ಕೆಲಸಕ್ಕೆ ಸಮಾನ ವೇತನ, ತಂದೆಯ ಆಸ್ತಿಯಲ್ಲಿ ಆಸ್ತಿಯ ಹಕ್ಕು ಸೇರಿದಂತೆ ಸ್ತ್ರೀಯರಿಗೆ ಸ್ವಾತಂತ್ರ್ಯ ಮತ್ತು ಸಬಲೀಕರಣಕ್ಕಾಗಿ ಹಗಲಿರುಳು ಶ್ರಮಿಸಿ, ಕಾನೂನುಬದ್ಧ ಹಕ್ಕುಗಳನ್ನು ನೀಡಿದ ಮಹಾನ್ ಮಾನವತಾವಾದಿ ಆಗಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಹಿರಿಯ ಹೋರಾಟಗಾರ, ಬಸಂಸ ಮಹಾಪೋಷಕ ಎಂ.ಆರ್.ಭೇರಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸಂಸ ಸದಸ್ಯ ರಾಮಾಂಜನೇಯ ಭಜಂತ್ರಿ. ವಹಿಸಿದ್ದರು. ವಿದ್ಯಾರ್ಥಿನಿ ಉಮಾದೇವಿ ರಾಮದುರ್ಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಬಹುಜನ ಸಂಘರ್ಷ ಸಮಿತಿ ತಾಲೂಕಾಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ಆಂಜಿನೇಯ್ಯ ಜಾಗೀರ ಜಾಡಲದಿನ್ನಿ, ಸದಸ್ಯರಾದ ನಾಗಾರ್ಜುನ ದೇವದುರ್ಗ, ಶಿವಕುಮಾರ್ ಬಸವರಾಜ್ ವಕೀಲರು, ಹನುಮೇಶ ನಾಯಕ, ನರಸಿಂಹ ನಾಯಕ, ಶಿವಲಿಂಗಪ್ಪ, ಚಂದ್ರು, ಮುದೆಪ್ಪ ಮುಷ್ಠೂರು, ಪದ್ದಮ್ಮ, ಕುಟುಂಬಸ್ಥರು ಸೇರಿದಂತೆ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.