ಸರ್ವಪಕ್ಷ ಸಭೆ ಕರೆದು ಲಾಕ್ ಡೌನ್ ಬಗ್ಗೆ ತಿರ್ಮಾನ: ಸಿಎಂ ಬಿಎಸ್ ವೈ

ಬೀದರ:ಎ.13: ರಾಜ್ಯದಲ್ಲಿ ಸದ್ಯಕ್ಕೆ ಲಾಕ್ಡೌನ್ ಜಾರಿ ಮಾಡುವ ಪ್ರಶ್ನೆಯೇ ಇಲ್ಲವೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮಾತನಾಡಿದ ಅವರು, ಲಾಕ್ಡೌನ್ ಜಾರಿ ಮಾಡಲು ಸಲಹಾ ಸಮಿತಿ ಸೂಚನೆ ನೀಡಿಲ್ಲ. ಸಮಿತಿಯಲ್ಲಿ ನಾನು ಇದ್ದೇನೆ. ಸಮಿತಿ ಆ ರೀತಿ ಸೂಚಿಸಿಲ್ಲ, ಸಲಹೆ ನೀಡಿಲ್ಲ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿಕೆಗೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ತಪ್ಪುಗಳನ್ನು ಹೇಳಬೇಡಿ ಎಂದು ತಿಳಿಸಿದ ಅವರು, ಸರ್ವಪಕ್ಷ ಸಭೆಯಲ್ಲಿ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಮುಂದೆ ಏನೇನು ಮಾಡಬೇಕೆಂದು ತೀರ್ಮಾನ ಮಾಡಲಾಗುವುದು. ಕೊರೋನಾ ತಡೆಯಲು ಜನತೆ ಸಹಕಾರ ನೀಡಬೇಕು. ಜನ ಇದನ್ನು ಮರೆತರೆ ಅನಾಹುತ ಆಗಲಿದೆ ಎಂದು ಹೇಳಿದ್ದಾರೆ.

ಸರ್ವಪಕ್ಷ ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬರುವುದಿಲ್ಲ ಎಂಬ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ ಅವರು, ಸಭೆಗೆ ಕರೆಯುತ್ತೇವೆ ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ಸಭೆ ಕರೆಯಿರಿ ಎಂದು ಅವರು ಹೇಳಿದ್ದರು. ಈಗ ಬರುವುದಿಲ್ಲ ಅಂತಿದಾರೆ ಎಂದರು.