ಸರ್ವಪಕ್ಷ ನಿಯೋಗ ಕೇಂದ್ರ ಸ್ಪಂದಿಸಿಲ್ಲ

ಹುಬ್ಬಳ್ಳಿ, ಸೆ.೯-ಮಹಾದಾಯಿ, ಕೃಷ್ಣ, ಕಾವೇರಿ ನೀರಾವರಿ ಯೋಜನೆಗಳ ಸಂಬಂಧ ಸರ್ವ ಪಕ್ಷ ನಿಯೋಗದ ಭೇಟಿಗೆ ಅವಕಾಶ ಕೋರಿ ಕೇಂದ್ರಕ್ಕೆ ರಾಜ್ಯ ಬರೆದಿರುವ ಪತ್ರಕ್ಕೆ ಇದುವರೆಗೂ ಉತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಹುಬ್ಬಳ್ಳಿ ವಿಮಾನನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ ಯೋಜನೆಗಳ ಸಂಬಂಧ ರಾಜ್ಯದ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯುವ ತೀರ್ಮಾನ ಮಾಡಿ ಪ್ರಧಾನಮಂತ್ರಿಗಳ ಭೇಟಿಗೆ ಸಮಯ ಕೋರಿ ಪತ್ರವನ್ನು ಬರೆಯಲಾಗಿದೆ.ಆದರೆ, ಪ್ರಧಾನಿ ಕಾರ್ಯಾಲಯದಿಂದ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದು ಅವರು ಹೇಳಿದರು.ಮಹದಾಯಿ, ಮೇಕೆದಾಟು ಯೋಜನೆಗಳ ಜಾರಿಗೆ ಸರ್ಕಾರ ಸಿದ್ಧವಿದೆ. ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಸಿಕ್ಕಿಲ್ಲ. ಹಾಗಾಗಿ, ಪ್ರಧಾನಿಗಳನ್ನು ಸರ್ವಪಕ್ಷ ನಿಯೋಗ ಭೇಟಿಯಾಗಲು ತೀರ್ಮಾನಿಸಿದ್ದೆವು, ಸಮಯ ಕೊಟ್ಟಾಗ ಪ್ರಧಾನಿಗಳನ್ನು ಭೇಟಿ ಮಾಡುತ್ತೇವೆ ಎಂದರು.
ಮಹದಾಯಿ ಯೋಜನೆಗೆ ಸಂಬಂಧಿಸಿದ ಎಲ್ಲ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಿ ಈಗಾಗಲೇ ಅಗತ್ಯ ಅನುಮತಿಗೆ ಮನವಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ರಾಜ್ಯದಲ್ಲಿ ವಿದ್ಯುತ್ ವ್ಯತ್ಯಯದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಗಸ್ಟ್‌ನಲ್ಲಿ ಸರಿಯಾಗಿ ಮಳೆಯಾಗಿಲ್ಲ. ಇದರಿಂದ ರೈತರಿಗೆ ಪಂಪ್‌ಸೆಟ್‌ಗೆ ಹೆಚ್ಚಿನ ವಿದ್ಯುತ್ ಅಗತ್ಯವಿದೆ. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಒದಗಿಸಲು ಅಗತ್ಯಕ್ರಮಕೈಗೊಳ್ಳುತ್ತೇವೆ. ಅಗತ್ಯ ಬಿದ್ದರೆ ಹೊರಗಿನಿಂದ ವಿದ್ಯುತ್ ಖರೀದಿಸಿಕಳುಹಿಸುತ್ತೇವೆ ಎಂದು ಅವರು ಹೇಳಿದರು.
ಬರ ಮಾನದಂಡ ಪರಿಷ್ಕರಣೆಗೆ ಮನವಿ
ಬರಗಾಲ ಘೋಷಣೆ ಸಂಬಂಧ ಇರುವ ಮಾರ್ಗಸೂಚಿಗಳನ್ನು ಸಡಿಲ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಇದುವರೆಗೂ ಉತ್ತರ ಬಂದಿಲ್ಲ ಎಂದು ಅವರು ಹೇಳಿದರು.
ಚುನಾವಣಾ ಸಂದರ್ಭದಲ್ಲಿ ಹಿಜಾಬ್, ಹಲಾಲ್, ಹಿಂದುತ್ವ, ಸನಾತನ ಧರ್ಮ ವಿವಾದಗಳು ಎದ್ದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರಗಳು ನ್ಯಾಯಾಲಯದಲ್ಲಿವೆ. ಈ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದರು.
ಕಳಪೆ ಸಮವಸ್ತ್ರ ತನಿಖೆ
ವಿದ್ಯಾವಿಕಾಸ ಯೋಜನೆಯಡಿ ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ಮಕ್ಕಳಿಗೆ ನೀಡಲಾಗಿರುವ ಸಮವಸ್ತ್ರ ಕಳಪೆಯಾಗಿರುವ ದೂರು ಬಂದಿದೆ,. ಈ ಬಗ್ಗೆ ತನಿಖೆ ನಡೆಸಲು ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದೇವೆ. ಕಳಪೆ ಬಟ್ಟೆಗೆ ಪಾವತಿಯಾಗಿರುವ ಹಣವನ್ನು ಸಂಬಂಧಪಟ್ಟವರಿಂದ ಮರು ಪಡೆಯಲು ಕ್ರಮಕೈಗೊಳ್ಳಲಾಗಿದೆ ಎಂದರು.

ಜೆಡಿಎಸ್‌ಗೆ ಸಿದ್ಧಾಂತ ಇಲ್ಲ
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಾತ್ಯಾತೀತ ಜನತಾದಳ ಎಂದು ಹೆಸರಿಟ್ಟುಕೊಂಡು ಕೋಮುವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಯಾವುದೇ ಸಿದ್ಧಾಂತ ಇಲ್ಲ ಎಂದರು. ಈ ಹಿಂದೆ ನಾನು ಜೆಡಿಎಸ್‌ನ್ನು ಬಿಜೆಪಿಯ ಬಿ ಟೀಂ ಎಂದಾಗ ಅವರು ಸಿಟ್ಟಾಗಿದ್ದರು. ಈಗ ಅದು ಸತ್ಯವಾಗಿದೆ. ಮಾಜಿ ಪ್ರಧಾನಿ ದೇವೇಗೌಡರು ಯಾವ ಕಾರಣಕ್ಕೂ ಬೇರೆ ಪಕ್ಷಗಳ ಜತೆ ಹೊಂದಾಣಿಕೆ ಇಲ್ಲ ಎಂದು ಹೇಳುತ್ತಿದ್ದರು. ಆದರೆ, ಪಕ್ಷದ ಉಳಿವಿಗಾಗಿ ಬಿಜೆಪಿ ಜತೆ ಜೆಡಿಎಸ್ ಕೈಜೋಡಿಸುತ್ತಿದೆ ಎಂದು ಜೆಡಿಎಸ್‌ನ ಶಾಸಕ ಜಿ.ಟಿ ದೇವೇಗೌಡರು ಹೇಳಿರುವುದನ್ನು ನೋಡಿದರೆ ಅಧಿಕಾರಕ್ಕಾಗಿ ಜೆಡಿಎಸ್ ಏನನ್ನು ಮಾಡಬೇಕಾದರು ಮಾಡುತ್ತದೆ. ಅವರಿಗೆ ಸಿದ್ಧಾಂತ ಇಲ್ಲ ಎಂದು ಟೀಕಿಸಿದರು.