ಸರ್ವಪಕ್ಷಗಳ ನಿಯೋಗ ಕೊಂಡೊಯ್ದು ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆಗೆ ಒತ್ತಾಯ

ವಿಜಯಪುರ ಸೆ.03: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೊಷಿಸಲು ಸರ್ವ ಪಕ್ಷಗಳ ನಿಯೊಗ ಪ್ರಧಾನಮಂತ್ರಿಗಳ ಬಳಿ ಕೊಂಡೊಯ್ಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು.

ಶನಿವಾರ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಣೆ ನೆರವೇರಿಸಿ, ಕೃಷ್ಣಾ ಮೇಲ್ದಂಡೆ ಕೆಬಿಜೆಎನ್‍ಎಲ್ ವ್ಯವಸ್ಥಾಪಕ ನಿರ್ದೇಶಕರ ಭೋರ್ಡ್ ಸಭಾಂಗಣದಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3 ಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ, ಪುನರ್ವಸತಿ ಹಾಗೂ ಪುನರ್ ನಿರ್ಮಾಣದ ಕುರಿತ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ನಮ್ಮ ಸರ್ಕಾರದ ಆದ್ಯತೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಪ್ರಧಾನಮಂತ್ರಿಗಳ ಬಳಿ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಲಾಗುವುದು. ಪ್ರಧಾನಮಂತ್ರಿಗಳು, ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ್, ಪುನರವಸತಿ ಹಾಗೂ ಪುನರ್‍ನಿರ್ಮಾಣಕ್ಕೆ ನಮ್ಮ ಸರ್ಕಾರ ಪ್ರಥಮಾದ್ಯತೆ ನೀಡಲಿದೆ. ಈ ಯೋಜನೆಯನ್ನು ಪೂರ್ಣಗೊಳಿಸಲು 5 ವರ್ಷ ಅಂದಾಜಿಸಲಾಗಿದ್ದು, ಸುಮಾರು 1ಲಕ್ಷ ಕೋಟಿ ಅನುದಾನ ನೀರಾವರಿಗೆ ಸರ್ಕಾರ ಆದ್ಯತೆ ಮೇಲೆ ವೆಚ್ಚ ಮಾಡಲಿದೆ. ಯೋಜನೆಯಿಂದ ಬಾಧಿತರಾಗುವ ಕುಟುಂಬಗಳಿಗೆ ತ್ವರಿತವಾಗಿ ಪುನರವಸತಿ ಕಲ್ಪಿಸಲು ಯೋಜನೆಯನ್ನು ರೂಪಿಸಲಾಗುವುದು. ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಲು ಕೂಡ ಯೋಜನೆಯನ್ನು ರೂಪಿಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಲಸಂಪನ್ಮೂಲ ಖಾತೆ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ, ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ನವದೆಹಲಿಯಲ್ಲಿನ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ-2 ಪ್ರಕಾಶ ಹುಕ್ಕೇರಿ, ಅಪ್ಪಾಜಿ ಸಿ.ಎಸ್.ನಾಡಗೌಡ, ವಿಠ್ಠಲ ಕಟಕಧೋಂಡ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.