ಸರ್ವಧರ್ಮ ರಕ್ತದಾನ ಶಿಬಿರ ೧೪ರಂದು: ಖೇಣೇದ್

ದೇವದುರ್ಗ.ಜೂ.೧೧-ಕರೊನಾ ಸಂಕಷ್ಟ ಸಮಯದಲ್ಲಿ ಆರೋಗ್ಯ ಇಲಾಖೆಯಲ್ಲಿ ರಕ್ತದ ಕೊರತೆ ತೀವ್ರವಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕು ವೀರಶೈವ ಸಮುದಾಯ, ಆರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ಜೂ.೧೪ರಂದು ಇಲ್ಲಿನ ಖೇಣೇದ್ ಮುರಿಗೆಪ್ಪ ಪಿಯು ಕಾಲೇಜಿನಲ್ಲಿ ಸರ್ವಧರ್ಮ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ ಎಂದು ವೀರಶೈವ ಸಮುದಾಯ ತಾಲೂಕು ಅಧ್ಯಕ್ಷ ಡಾ.ಕಿರಣ್ ಖೇಣೇದ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ರಾಯಚೂರಿನ ರಿಮ್ಸ್ ಹಾಗೂ ತಾಲೂಕಿನ ಬ್ಲೆಡ್ ಬ್ಯಾಂಕ್‌ಗಳಲ್ಲಿ ಲಾಕ್‌ಡೌನ್ ಸಮಯದಲ್ಲಿ ರಕ್ತದ ಕೊರತೆ ತೀವ್ರವಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಶಿಬಿರ ಆಯೋಜಿಸಲಾಗಿದೆ. ೧೮ವರ್ಷ ಮೇಲ್ಪಟ್ಟ ಆರೋಗ್ಯವಂತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಬೇಕು.
ಸರ್ವಧರ್ಮ ರಕ್ತದಾನ ಶಿಬಿರ ಆಯೋಜಿಸಿದ್ದರಿಂದ ಮುಸ್ಲಿಮರು, ಕ್ರಿಶ್ಚಿಯನ್‌ನರು, ವಾಲ್ಮೀಕಿ ನಾಯಕ, ಎಸ್ಸಿ, ವೀರಶೈವ ಸಮುದಾಯ ಸೇರಿ ಎಲ್ಲ ಸಮುದಾಯ ಹಾಗೂ ಜಾತಿ ಜನರು ರಕ್ತದಾನ ಮಾಡಲಿದ್ದಾರೆ. ಈ ಬಗ್ಗೆ ಆಯಾ ಸಮುದಾಯ ಮುಖಂಡರಿಗೆ ಜಾಗೃತಿ ಮೂಡಿಸಲಿದೆ. ಬೆಳಗ್ಗೆ ೧೦ಕ್ಕೆ ನಡೆಯುವ ರಕ್ತದಾನ ಶಿಬಿರದಲ್ಲಿ ವಿವಿಧ ಮಠದ ಸ್ವಾಮೀಜಿಗಳು ಹಾಗೂ ಸರ್ವಧರ್ಮದ ಗುರುಗಳು ಪಾಲ್ಗೊಳ್ಳಿದ್ದಾರೆ. ಸುಮಾರು ೨೫೦ರಿಂದ ೩೦೦ ಜನರಿಂದ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಶಿಬಿರದಲ್ಲಿ ರಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ ಎಂದರು.
ರಕ್ತದಾನ ಜತೆಗೆ ೧೮ರಿಂದ ೬೦ವರ್ಷದ ಜನರಿಗೆ ಕರೊನಾ ವ್ಯಾಕ್ಸಿನ್ ಹಾಕುವ ಶಿಬಿರ ಕೂಡ ಅಯೋಜಿಸಿದ್ದು, ಸಾರ್ವಜನಿಕ ಆಸ್ಪತ್ರೆ ಸಹಯೋಗ ನೀಡಿದೆ. ಆರೋಗ್ಯ ಇಲಾಖೆಯಿಂದ ವಿವಿಧೆಡೆ ಹಾಕಲಾಗುತ್ತಿರುವ ವ್ಯಾಕ್ಸಿನ್ ಶಿಬಿರಕ್ಕೆ ಜನರು ಬಾರದ ಹಿನ್ನೆಲೆ, ನಮ್ಮ ಶಿಬಿರದ ಜತೆಗೆ ವ್ಯಾಕ್ಸಿನ್ ಹಾಕುವ ಪ್ರಕ್ರಿಯೆ ಚಾಲನೆ ನೀಡಲಾಗುವುದು. ಯಾವುದೇ ವ್ಯಕ್ತಿ ಶಿಬಿರದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಬಹುದು. ಅಲ್ಲದೆ ಅರಣ್ಯ ಇಲಾಖೆ ಸಹಯೋಗದಲ್ಲಿ ಇಲ್ಲಿನ ಆವರಣದಲ್ಲಿ ೫೦೦ ಸಸಿ ನೆಡುವ ಗುರಿ ಹೊಂದಲಾಗಿದೆ. ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಪಾಲ್ಗೊಂಡು ಶಿಬಿರ ಯಶ್ವಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಪಾಟೀಲ್ ಮಿಯ್ಯಾಪುರ, ಬಸವರಾಜ ವಾರದ್, ವಿಶ್ವನಾಥ, ಸಾಜೀದ್ ಸೇಠ್, ಚಂದ್ರಶೇಖರ, ಅಮರಪ್ಪ, ರೂಪಾ ಶ್ರೀನಿವಾಸ್ ನಾಯಕ ಇತರರಿದ್ದರು.