ಸರ್ವಧರ್ಮ ರಂಜಾನ್ ಸ್ನೇಹಮಿಲನ

ಚಿತ್ರದುರ್ಗ.ಮೇ.೧;  – ತಾನು ಬೇರೆಯವರಿಗೆ ಮಾಡಿದ ಉಪಕಾರ, ಬೇರೆಯವರು ನಮಗೆ ಮಾಡಿದ ಅಪಕಾರವನ್ನು ಮರೆಯಬೇಕು. ಎಲ್ಲ ಧರ್ಮಗಳಲ್ಲು ಕ್ಷಮಾಪಣೆ ಇದೆ. ನಾವು ಎಲ್ಲರ ಜೊತೆ ಸಹಭೋಜನ, ಸಹಚಿಂತನ ಮಾಡಿದಾಗ ಸಮೂಹ ಜೀವನಕ್ಕೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.ರಂಜಾನ್ ಹಬ್ಬದ ಪ್ರಯುಕ್ತ ಹೆಮ್ಮೆಯ ಯು.ಎ.ಇ. ಕನ್ನಡಿಗರು, ದುಬೈ ಸಂಯುಕ್ತ ಅರಬ್ ಸಂಸ್ಥಾನ ವತಿಯಿಂದ ನಡೆದ ಸರ್ವಧರ್ಮ ರಂಜಾನ್ ಸ್ನೇಹಮಿಲನ ಮತ್ತು ಕೋವಿಡ್‌ಮುಕ್ತ ವಿಶ್ವಕ್ಕಾಗಿ ಪ್ರಾರ್ಥನಾ ಸಭೆಯ ದಿವ್ಯಸಾನ್ನಿಧ್ಯ ವಹಿಸಿ ಆನ್‌ಲೈನ್ ಮೂಲಕ ಶ್ರೀಗಳು ಚಿಂತನ ನೀಡಿದರು.ಕೊರೋನಾ ಕಾಯಿಲೆ ಜಗತ್ತಿನಾದ್ಯಂತ ಸಂಕೀರ್ಣ ಸ್ಥಿತಿ ಸೃಷ್ಟಿ ಮಾಡಿದೆ. ಇಂದು ಸಂಕೀರ್ಣ ಮತ್ತು ಸಂದಿಗ್ಧ ಕಾಲ. ಅಪಾರ ಜೀವಹಾನಿಯನ್ನುಂಟು ಮಾಡುತ್ತಿದೆ. ನಮ್ಮ ಅಕ್ಕಪಕ್ಕದವರನ್ನು ಕಳೆದುಕೊಳ್ಳುತ್ತಿದ್ದೇವೆ. ಅದರ ಜೊತೆ ಉತ್ತಮ ಕಾರ್ಯಗಳನ್ನು ಮಾಡೋಣ ಮಾನವರ ಸೇವೆ ಮಾಡೋಣ ಎಂಬ ಎಚ್ಚರಿಕೆಯ ಗಂಟೆ ನೀಡುತ್ತ ಸಂಕಷ್ಟ ಜಗತ್ತನ್ನು ಒಗ್ಗೂಡಿಸುತ್ತಿದೆ. ನಮಗೆ ಇದು ಎಚ್ಚರಿಕೆಯ ಗಂಟೆ. ಸುಖ ಸಂಪತ್ತಿನ ಜೊತೆ ಹೋಗುವವರು ಮನೆಯಲ್ಲಿ ಉಳಿಯುತ್ತಾರೆ. ಸಂತರು ಪ್ರವಾದಿಗಳು ಸಂಕಷ್ಟ ಬಂದಾಗ ಬೀದಿಗೆ ಬರುತ್ತಾರೆ. ಅವರು ಅನ್ನ ಆಹಾರ ಹಂಚುತ್ತಾರೆ. ಭಾರತೀಯರಿಗೆ ಶ್ರಾವಣ ಮೊದಲಾದವು ಪವಿತ್ರವಾದರೆ ಮುಸ್ಲಿಂ ಬಾಂಧವರಿಗೆ ಉಪವಾಸ ಮಾಡುತ್ತ ರಂಜಾನ್ ಆಚರಿಸುತ್ತಾರೆ. ಈ ತಿಂಗಳ ಪ್ರಾಮುಖ್ಯತೆ ಎಂದರೆ ಸಹಭೋಜನ. ಎಲ್ಲರನ್ನು ಅಂದರೆ, ವಿರೋಧಿಗಳನ್ನೂ ಸಹ ಆಮಂತ್ರಿಸುತ್ತಾರೆ. ಬಸವಣ್ಣನವರು ಅದನ್ನೇ ಹೇಳುತ್ತಾರೆ. ಸೇವಿಸುವ ಆಹಾರಕ್ಕೆ ಕೆಲವರು ಅನ್ನ, ಕೂಳು ಮೊದಲಾಗಿ ಹೇಳುತ್ತಾರೆ. ಬಸವಣ್ಣನವರ ಪ್ರಕಾರ ಶರಣಸಂಸ್ಕೃತಿಯಲ್ಲಿ ಪ್ರಸಾದ. ಇಸ್ಲಾಂನಲ್ಲಿ ಜಕಾತ್ ಎನ್ನುತ್ತಾರೆ. ಸಧ್ಯದ ಪರಿಸ್ಥಿತಿಯು ಅಂತಃಪ್ರಜ್ಞೆ ಪ್ರೇರೇಪಿಸುವ ಮತ್ತು ಅನುಸಂಧಾನದ ಕಾಲ. ಕರೆದುಕೊಂಡು ಉಣ್ಣುವ ಕಾಲ. ಮಾತ್ರ ಎಚ್ಚರಿಕೆಯ ಕಾಲವೂ ಅಹುದು. ಯಾರು ಅಸಹಾಯಕರಾಗಿದ್ದಾರೆ ಯಾರ ಬದುಕಿನಲ್ಲಿ ಅಸಹಾಯಕತೆ ಇದೆಯೋ ಅವರಿಗೆ ಸಹಾಯ ಹಸ್ತ ನೀಡುವುದು. ಶರಣರು ಸಂತರು ಸೂಫಿಗಳು ಕಷ್ಟಜೀವಿಗಳಿಗೆ ಸಹಾಯ ಹಸ್ತ ನೀಡುತ್ತಾರೆ. ಮಸೀದಿ, ಮಂದಿರ, ಚರ್ಚ್, ಇಗರ್ಜಿಗಳಿಗೆ ಒಂದು ಜವಾಬ್ದಾರಿ ಇರುತ್ತದೆ. ನಮ್ಮ ಕಾಯಕ ಪೂಜೆಯಾಗಬೇಕು. ನಮಗೆ ದುಡಿದು ಉಣ್ಣುವವರು ಬೇಕು. ಪ್ರತಿಯೊಬ್ಬ ಮುಸ್ಲಿಂ ಬಾಂಧವರು ದುಡಿದು ಉಣ್ಣುತ್ತಾರೆ. ಧರ್ಮ ಎನ್ನುವುದು ಪರಮ ಪರಿಜ್ಞಾನ ಉಂಟು ಮಾಡುತ್ತದೆ. ನಾವೆಲ್ಲ ದೈನಂದಿನ ಜೀವನದಲ್ಲಿ ಶಾಂತಿ, ಸಹನೆ, ಸಾಮರಸ್ಯದಿಂದ ಜೀವಿಸೋಣವೆಂದರು.ಪದ್ಮಶ್ರೀ ಇಬ್ರಾಹಿಂ ಸುತಾರ, ಮಂಗಳೂರಿನ ಮೌಲಾನ ಸುಫಿಯಾನ್ ಸಖಾಫಿ, ಮೌಲಾನಾ ಅನೀಸ್ ಕೌಸರಿ, ಮಹಮ್ಮದ್ ಕುಂಞ, ಹಾಸನದ ಫಾದರ್ ಅಂತೋಣಿ, ಕೆಎನ್‌ಆರ್‌ಐನ ಡಾ. ಆರತಿ ಕೃಷ್ಣ, ದುಬೈನ ಖಲೀಲ್ ಕಾಸರಗೋಡು, ಮಹಮ್ಮದ್ ಮುಸ್ತಾಫ ಮತ್ತು ರಫೀಕ್ ಅಲಿ ಮೊದಲಾದವರು ಭಾಗವಹಿಸಿದ್ದರು. ಇದಕ್ಕು ಮುನ್ನ ಮುಸ್ತಾಫ ನಾಡಗೀತೆ ಹಾಡುವಾಗ ಎಲ್ಲರು ಎದ್ದು ನಿಂತು ಗೌರವ ಸಲ್ಲಿಸಿದರು.ಪಲ್ಲವಿ ಸ್ವಾಗತಿಸಿದರು. ಮೊಹಮ್ಮದ್ ಅಸ್ಘರ್ ಸೋಂಪಾಡಿ ಕುರಾನ್ ಪಠಣ ಮಾಡಿದರು. ಸೈಯದ್ ಅಸ್ಗರ್ ಅಲಿ ಪ್ರಾರ್ಥಿಸಿದರು.