
ಬೀದರ,ಜು 2:ಬೀದರ ಜಿಲ್ಲೆಯ ಜನರಿಗೆ ನೀರು ಉಣಿಸುವ ಕಾರಂಜಾ ಯೋಜನೆ ನಿರ್ಮಾಣಕ್ಕೆ ತಾಯಿ ಸಮಾನ ಭೂಮಿ ನೀಡಿದ ರೈತ ಸಂತ್ರಸ್ತರ ನ್ಯಾಯಯುತವಾದ ಬೇಡಿಕೆ ಈಡೇರಿಸಲು ರಾಜಕಿಯ ಇಚ್ಛಾಶಕ್ತಿ ಅತೀ ಅವಶ್ಯಕವಾಗಿದೆ ಎಂದು ಕಲ್ಯಾಣ ಕರ್ನಾಟಕ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿಯವರು ಸರಕಾರಕ್ಕೆ ಆಗ್ರಹಿಸಿದರು. ಸಂತ್ರಸ್ತರ ಆಹೋರಾತ್ರಿ ಸತ್ಯಾಗ್ರಹದ ವರ್ಷಾಚರಣೆ ನಿಮಿತ್ಯ ಸರ್ವಧರ್ಮ ದೇವರುಗಳ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ, ವಿನೂತನ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾರಂಜಾ ನೀರಾವರಿ ಯೋಜನೆಗೆ ಭೂಮಿ ಮನೆ, ಮಠ ಕಳೆದುಕೊಂಡ ರೈತ ಸಂತ್ರಸ್ತರು ಸುಮಾರು ಒಂದು ವರ್ಷದಿಂದ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ಬರುವ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿರುವಂತೆ ಕಾಲಮಿತಿಯಲ್ಲಿ ಕಾರಂಜಾ ಸಂತ್ರಸ್ತರ ಬೇಡಿಕೆ ಈಡೇರಿಸಲು ಸವಾಲಾಗಿ ಸ್ವೀಕರಿಸಬೇಕೆಂದು ಜಿಲ್ಲೆಯ ಉಭಯ ಸಚಿವರಲ್ಲಿ ಆಗ್ರಹಿಸಿದರು.
ಹಿಂದಿನ ಸರಕಾರದ ಬೀದರ ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ, ಸ್ಥಳಿಯ ಸಚಿವರು, ಕೇಂದ್ರ ಸಚಿವರು ಆಡಳಿತ ರೂಢ ಜನಪ್ರತಿನಿಧಿಗಳು, ಈ ಹೋರಾಟಕ್ಕೆ ಸ್ಪಂದನೆ ನೀಡದೆ ನಿರ್ಲಕ್ಷ ತೋರಿರುವದು ಖೇದಕರ ಎಂದು ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಹುಚಕನಳ್ಳಿ ಸೇರಿದಂತೆ ಅನೇಕರು ನೋವು ತೋಡಿಕೊಂಡರು. ಮುಖಂಡರಾದ ಸಾಜಿದ ಅಲಿ ರಂಜೋಲಿ, ದಯಾನಂದ ಪಾಟೀಲ, ಚಂದ್ರಕಾಂತ ಹಾಲಹಳ್ಳಿ ವಕೀಲರು, ರಾಜಪ್ಪ ಕಮಲಪೂರ ಮುಂತಾದವರು ಮಾತನಾಡಿದರು. ನಾಗಶೆಟ್ಟಿ ಹಚ್ಚೆ, ಕಲ್ಯಾಣರಾವ ಚನಶೆಟ್ಟಿ, ಮಹೇಶ ಕಮಲಪೂರ, ಮನ್ನಾನ್ ಪಟೇಲ್, ಅಬ್ದಗುಲ ಗಫಾರ್, ಮಹ್ಮದ ಆರೀಫ್, ಹಬೀಬ್ ಸೇರಿದಂತೆ ನೂರಾರು ಜನ ಮಹಿಳೆಯರು,ರೈತ ಸಂತ್ರಸ್ತರು ಭಾಗವಹಿಸಿದರು.