ಸರ್ವತೋಮುಖ ಅಭಿವೃದ್ದಿಗೆ ಶಿಕ್ಷಣವೊಂದೇ ಮಾರ್ಗ – ಡಾ. ಪ್ರಸಾದ

ಧಾರವಾಡ ನ 16 : ವ್ಯಕ್ತಿಯ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಶಿಕ್ಷಣವೊಂದೇ ಮಾರ್ಗ ಎಂದು ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದ ತಿಳಿಸಿದರು.
ಧಾರವಾಡದ ವಿದ್ಯಾಗಿರಿಯ ಸನ್ನೀಧಿ ಕಲಾಕ್ಷೇತ್ರದಲ್ಲಿ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ದೀಕ್ಷಾಭೋದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಕಲೆ, ಸಾಹಿತ್ಯದಲ್ಲಿ ಅಭಿರುಚಿಯಿರಲಿ, ಆದರ್ಶ ವಿದ್ಯಾರ್ಥಿಯಾದವನು ತನ್ನ ವಿದ್ಯಾಭ್ಯಾಸದ ಹೊರತಾಗಿ ಕ್ರೀಡೆ, ಕಲೆ ಮತ್ತು ಸಾಹಿತ್ಯದಲ್ಲೂ ಹೆಚ್ಚಿನ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ತನ್ನೊಳಗೆ ಸುಪ್ತವಾಗಿರುವ ಪ್ರತಿಭೆಗಳನ್ನು ಪ್ರಕಟಿಸಲು ಅವಕಾಶ ಬಂದಾಗ ಹಿಂಜರಿಯಬಾರದು. ಕ್ರೀಡೆಗಳಿಂದ ಶರೀರವೂ ಬಲಿಷ್ಠವಾಗುವುದರ ಜೊತೆ ಮನೋವಿಕಾಸವೂ ಆಗುತ್ತದೆ ಮತ್ತು ದೃಷ್ಟಿಕೋನವೂ ವಿಶಾಲವಾಗುತ್ತದೆ. ಅಂತೆಯೇ ಜೀವನದಲ್ಲಿ ಸೋಲು ಗೆಲುವುಗಳನ್ನು ಏಕ ರೂಪದಲ್ಲಿ ಸ್ವೀಕರಿಸುವ ಆಂತರಿಕ ಶಕ್ತಿಯೂ ಬೆಳೆಯುತ್ತದೆ ಎಂದರು. ನಮ್ಮ ಶಿಕ್ಷಣ ವ್ಯವಸ್ಥೆ ಅಕ್ಷರಸ್ಥರನ್ನು ಪದವೀಧರರನ್ನು ಸೃಷ್ಟಿಸುತ್ತಿದೆಯೇ ಹೊರತು ನಿಜವಾದ ಶಿಕ್ಷಿತರನ್ನಲ್ಲ. ಮೌಲ್ಯಾಧಾರಿತ ಸಂಪೂರ್ಣ ಶಿಕ್ಷಣವೊಂದೇ ಸಮಾಜದ ಮತ್ತು ದೇಶದ ಉನ್ನತಿಗೆ ಮೂಲಾಧಾರ. ನಿಜವಾದ ಶಿಕ್ಷಣ ನಮಗೆ ಬದುಕುವುದನ್ನು ಕಲಿಸಬೇಕು. ವ್ಯಕ್ತಿಯನ್ನು ಜ್ವಲಂತ ರಾಷ್ಟ್ರ ಪ್ರಜ್ಞೆಯುಳ್ಳ ಸುಸಂಸ್ಕøತ ನಾಗರಿಕನನ್ನಾಗಿ ಮಾಡುವುದೇ ಶಿಕ್ಷಣದ ಮುಖ್ಯ ಉದ್ದೇಶವಾಗಿರಬೇಕು. ಈ ರೀತಿಯ ಶಿಕ್ಷಣವನ್ನು ನಮ್ಮ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ನೀಡಲಾಗುತ್ತದೆ ಎಂದು ಹೇಳಿದರು.
ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಅಭಿಮನ್ಯು ಅಕ್ಯಾಡೆಮಿಯ ಅರ್ಜುನ್ ದೇವಯ್ಯ ಅವರು ಈ ದೀಕ್ಷಾಬೋಧ ಕಾರ್ಯಕ್ರಮದಲ್ಲಿ ಎರಡು ದಿನದ ವ್ಯಕ್ತಿತ್ವ ವಿಕಸನದ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ಸೂರಜ್ ಜೈನ್ ಸ್ವಾಗತಿಸಿದರು. ಕು. ಮಹಿಮಾ ಭಟ್ ನಿರೂಪಿಸಿದರು. . ವಿವೇಕ ಲಕ್ಷ್ಮೇಶ್ವರ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.