ಸರ್ವಜ್ಞ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಕಲಬುರಗಿ:ನ.15:ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಹಾಗೂ ಸರ್ವಜ್ಞ ಚಿಣ್ಣರ ಲೋಕ ಶಾಲೆ ಕಲಬುರಗಿಯಲ್ಲಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರ್‍ಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ “ಮಕ್ಕಳ ದಿನಾಚರಣೆ”ಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ 2019-20ನೇ ಶೈಕ್ಷಣಿಕ ಸಾಲಿನಲ್ಲಿ 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಪ್ರಥಮ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು “ಮಕ್ಕಳು ದೇವರಿದ್ದಂತೆ ಜಗತ್ತಿನಲ್ಲಿ ಎಲ್ಲರೂ ಮಕ್ಕಳನ್ನು ಪ್ರೀತಿಸುತ್ತಾರೆ. ಮಕ್ಕಳಲ್ಲಿ ಯಾವುದೇ ಜಾತಿ, ಧರ್ಮ, ವರ್ಗ, ವರ್ಣ, ಪಂಗಡ ಎಂಬುದಿರುವುದಿಲ್ಲ. ಅವರಲ್ಲಿ ಉತ್ಕøಷ್ಠ ಉತ್ತಮವಾದ ಗುಣಗಳಿರುತ್ತವೆ, ಮಕ್ಕಳ ಮುಗ್ಧ ನಗು, ನಿಷ್ಕಲ್ಮಶ ಪ್ರೀತಿಯನ್ನು ನಾವು ಪೋಷಿಸಬೇಕು ಎಂದರು. ಆದರೆ ಈ ವರ್ಷ ಮಕ್ಕಳಿಲ್ಲದೆ ಮಕ್ಕಳ ದಿನಾಚರಣೆ ಮಾಡುವುದು ಇತಿಹಾಸದಲ್ಲಿಯೇ ಪ್ರಪ್ರಥಮ ಎಂದರು.

ಈ ದೇಶದ ಭವಿಷ್ಯವಾದ ಮಕ್ಕಳ ಅಭಿವೃದ್ಧಿಗಾಗಿ, ಅವರ ಪ್ರಗತಿಗಾಗಿ ಶಿಕ್ಷಕರು ಸದಾ ಶ್ರಮಿಸಬೇಕು. ಎತ್ತರದ ಪ್ರದೇಶದಿಂದ ನೀರು ಸಹಜವಾಗಿ ಹರಿದು ಬರುವಂತೆ ಮಕ್ಕಳನ್ನು ಪ್ರೀತಿಸಿ ತಿದ್ದುವ, ಪ್ರೋತ್ಸಾಹಿಸುವ ಗುಣ ಶಿಕ್ಷಕರಲ್ಲಿ ಸಹಜವಾಗಿಯೇ ಇರಬೇಕು. ಪ್ರತಿಯೊಂದು ಮಕ್ಕಳಲ್ಲಿ ವಿಶೇಷ ಗುಣವಿರುತ್ತದೆ ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಶಿಕ್ಷಕರಿಗೆ ಮತ್ತು ಪಾಲಕರಿಗೆ ಕಿವಿಮಾತು ಹೇಳಿದರು. ಗೌರವಾನ್ವಿತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲರು ಹೇಳಿದ ಹಾಗೆ “ಮಕ್ಕಳು ದೇಶದ ಸಂಪತ್ತು, ಅವರನ್ನು ಕಡೆಗಣಿಸಿದರೆ ಈ ದೇಶದ ಭದ್ರ ಬುನಾದಿಯನ್ನೇ ಕಡೆಗಣಿಸಿದಂತೆ”, ಹಾಗಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶಿಕ್ಷಕರೂ, ಪಾಲಕರೂ ಲಕ್ಷವಹಿಸಬೇಕೆಂದರು.

ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಂಡು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಾನುಭಾವರ ಆದರ್ಶಗಳನ್ನು ಮೈಗೂಡಿಸಿಕೊಂಡು ಶ್ರೇಷ್ಠ ಸಾಧನೆ ಮಾಡಬೇಕು ಎಂದರು. ಪ್ರಪಂಚದಲ್ಲಿನ ಕೆಟ್ಟದನ್ನು ಬಿಟ್ಟು ಒಳ್ಳೆಯದನ್ನು ಮಾತ್ರ ತನ್ನದಾಗಿಸಿಕೊಳ್ಳಬೇಕು. ಪ್ರಯತ್ನಪಟ್ಟು ಓದಿದವರಿಗೆ ಪ್ರತಿಫಲ ದೊರೆಯುತ್ತದೆ. ಅವರಿಗೆ ಒಳ್ಳೆಯ ಭವಿಷ್ಯವಿರುತ್ತದೆ ಇದು ಸತ್ಯ. ಸತ್ಯವಿದ್ದುದನ್ನು ಸದಾ ನಂಬಬೇಕು ಎಂದರು. ಕಷ್ಟಪಟ್ಟು, ಶೃದ್ಧೆ ನಿಷ್ಠೆಯಿಂದ ಕೆಲಸ ಮಾಡಿದಾಗ ಬದುಕು ಬಂಗಾರವಾಗುತ್ತದೆ. ಈಗಿನ ಶ್ರಮದ ಮೂರು ಬೆವರಿನ ಹನಿಗಳು ಮುಂಬರುವ ನೂರು ಕಣ್ಣೀರ ಹನಿಗಳನ್ನು ತಡೆಯುತ್ತವೆ ಎಂಬ ನ್ಯಾಯಮೂರ್ತಿ ಶಿವರಾಜ ಪಾಟೀಲರ ಅನುಭಾವದ ನುಡಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಅವರ ಮುಖದಲ್ಲಿ ಸಂತೋಷ ಮೂಡಿಸುವುದು ಶ್ರೇಷ್ಠ ಕೆಲಸವಾಗಿದೆ. ಬದುಕಿಗೆ ಹಣಬೇಕು. ಆದರೆ ಅದುವೇ ಸರ್ವಸ್ವವಲ್ಲ. ಸಮಾಜ ಸೇವೆ ಮಾಡುತ್ತ, ಮೌಲಿಕವಾದ ಕೃತಿಗಳನ್ನು ಓದುತ್ತ, ಸಾಧಕರ ಜೀವನವನ್ನು ಆದರ್ಶವಾಗಿಟ್ಟುಕೊಂಡು ಆ ರೀತಿ ಬದುಕಿ ಜೀವನವನ್ನು ಸಾರ್ಥಕವಾಗಿಸಿಕೊಳ್ಳಬೇಕು. ಕಷ್ಟ ಬಂದರೆ ಕುಗ್ಗದೆ ಸುಖ ಬಂದರೆ ಹಿಗ್ಗದೆ ಸಾಧನೆಯ ದಾರಿಯಲ್ಲಿ ಮುಂದುವರೆಯಬೇಕು. ವಿದ್ಯಾರ್ಥಿಗಳು ತಂದೆ-ತಾಯಿಯರ ಸೇವೆ ಮಾಡುತ್ತ, ಗುರು ಹಿರಿಯರಿಗೆ ಗೌರವ ಕೊಡುತ್ತ, ಉತ್ತಮ ನಾಗರಿಕರಾಗಿ ದೇಶದ ಸತ್ಪ್ರಜೆಯಾಗಿ ಬಾಳಬೇಕೆಂದು ಪ್ರೇರೇಪಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಂ.ಸಿ. ಕಿರೇದಳ್ಳಿ ಅವರು ಸ್ವಾಗತಿಸಿದರು. ಶ್ರೀಮತಿ ವಿನುತಾ ಆರ್.ಬಿ. ಪ್ರಾಚಾರ್ಯರು ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜು, ಶ್ರೀ ರಾಮಚಂದ್ರ ಶಿಂಧೆ ಪ್ರಾಚಾರ್ಯರು ಸರ್ವಜ್ಞ ಶಾಲೆ, ಶ್ರೀ ಪ್ರಭುಗೌಡ, ಶ್ರೀ ಕರುಣೇಶ್ ಹಿರೇಮಠ, ಶ್ರೀ ಪ್ರಶಾಂತ ಕುಲಕರ್ಣಿ, ಶ್ರೀ ಪ್ರಥ್ವಿರಾಜಗೌಡ, ಶ್ರೀ ಗುರುರಾಜ ಕುಲಕರ್ಣಿ, ಬೋಧಕ-ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ಶ್ರೀಮತಿ ಲಕ್ಷ್ಮೀ ಶೈಲಜಾ ಸಂಗಡಿಗರು ಪ್ರಾರ್ಥಿಸಿದರು. ಶ್ರೀಮತಿ ತ್ರಿವೇಣಿ ವಂದಿಸಿದರು. ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು. ನಂತರ ಶಿಕ್ಷಕರು ಮಕ್ಕಳಿಗಾಗಿ “ಕಿರು ನಾಟಕ” ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು: ಸುಪ್ರಿಯಾ ತಂದೆ ಪ್ರೇಮಕುಮಾರ-97%, ಸುಮಿತ್ರಾಬಾಯಿ ತಂದೆ ಕಲ್ಯಾಣಿ-95%, ಶಾಂಭವಿ ತಂದೆ ಗೌಡಪ್ಪ-94.56%.

ಪ್ರಥಮ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು: ಶಿವಲಿಂಗ ತಂದೆ ಶರಣಬಸಪ್ಪ-95.83%, ಭಾಗ್ಯಶ್ರೀ ತಂದೆ ಬಸವರಾಜ-95.17%, ಬನಶಂಕರ ತಂದೆ ರಾಯಪ್ಪ-95%, ಶ್ವೇತಾ ತಂದೆ ಬಾಬುರಾಠೋಡ-94%, ರಾಜಕುಮಾರ ತಂದೆ ಶಿವಬಸಪ್ಪಗೌಡ-94%.ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.