ಸರ್ವಜ್ಞರ ವಚನಗಳು ಮನುಕುಲಕ್ಕೆ ದಿವ್ಯ ಬೆಳಕು:ಸಂತೋಷ ಬಂಡೆ

ಇಂಡಿ:ಫೆ.21: ಸರ್ವಜ್ಞರ ವಚನಗಳು ಅನುಭಾವದ ದಿವ್ಯ ಬೆಳಕಾಗಿದ್ದು, ಅವು ನಿಜಕ್ಕೂ ಬೆಲೆ ಕಟ್ಟಲಾಗದ ಅಮೂಲ್ಯ ಆಸ್ತಿ. ಆ ಬೆಳಕಿನಿಂದ ವ್ಯಕ್ತಿಗತ ಬದುಕಿನ ಕತ್ತಲೆ ಕಳೆದುಕೊಳ್ಳಬೇಕು.ಅವರ ವಚನಗಳಲ್ಲಿರುವ ಮನುಕುಲದ ಉನ್ನತಿಯ ತತ್ವಸಿದ್ಧಾಂತಗಳನ್ನು ಅನುಪಾಲಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಜಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಸರ್ವಜ್ಞರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಆತ್ಮೋದ್ಧಾರ ಮತ್ತು ಲೋಕೋದ್ಧಾರಕ್ಕೆ ಬೇಕಾದ ಎಲ್ಲ ತತ್ವಗಳು ಸರ್ವಜ್ಞರ ವಚನಗಳಲ್ಲಿವೆ. ಅವರ ವಚನಗಳಲ್ಲಿ ಅಡಗಿದ ಸತ್ಯ, ಅಹಿಂಸೆ, ನಿಸ್ವಾರ್ಥ, ಪ್ರೀತಿ, ತ್ಯಾಗ, ಸ್ನೇಹ, ಪ್ರಾಮಾಣಿಕತೆಯಂತಹ ಜೀವನ ಮೌಲ್ಯಗಳನ್ನು ಇಂದಿನ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು. ಶಿಕ್ಷಕಿ ಎಸ್ ಬಿ ಕುಲಕರ್ಣಿ ಮಾತನಾಡಿ, ಸರ್ವಜ್ಞ ತನ್ನ ಹಿತನುಡಿಗಳಿಂದ ಸಮಾಜವನ್ನು ಒಳ್ಳೆಯ ಹಾದಿಯಲ್ಲಿ ಮುನ್ನಡೆಸಿದ್ದಾರೆ. ಇವರ ತ್ರಿಪದಿಗಳಲ್ಲಿರುವ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ವಿ ವೈ ಪತ್ತಾರ ಮಾತನಾಡಿ, ಆಡು ಮಾತಿನಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು ಸರ್ವಜ್ಞ. ಅವಿದ್ಯಾವಂತರಾದವರೂ ಎಲ್ಲ ಜನರನ್ನೂ ಒಂದೇ ದೃಷ್ಟಿಯಿಂದ ನೋಡಿ ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದವರು ಎಂದರು.
ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ, ಶಿಕ್ಷಕರಾದ ಎಸ್ ಎಂ ಪಂಚಮುಖಿ, ಎಸ್ ಡಿ ಬಿರಾದಾರ, ಎಸ್ ಎನ್ ಡಂಗಿ, ಜೆ ಸಿ ಗುಣಕಿ ಹಾಗೂ ಅತಿಥಿ ಶಿಕ್ಷಕರಾದ ಸಂತೋಷ ಬಿರಾದಾರ, ಯಲ್ಲಮ್ಮ ಸಾಲೋಟಗಿ ಮತ್ತು ಮಕ್ಕಳು ಭಾಗವಹಿಸಿದ್ದರು.