ಸರ್ವಜನಾಂಗದವರಿಗೆ ನ್ಯಾಯ ಒದಗಿಸಿದ ಕೀರ್ತಿ ಬಾಬಾ ಸಾಹೇಬರಿಗೆ ಸಲ್ಲುತ್ತದೆ : ರವೀಂದ್ರ ಸ್ವಾಮಿ

ಔರಾದ:ಎ.15: ತಾಲೂಕಿನ ಬಳತ್ ಕೆ. ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ವಿಶ್ವರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತಿ ಉತ್ಸವವನ್ನು ಅತ್ಯಂತ ಸಂತೋಷ ಮತ್ತು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಬಳತ್ ಗ್ರಾಮದ ನೂರಾರು ಮಕ್ಕಳು, ಮಹಿಳೆಯರು ಹಾಗೂ ಹಿರಿಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಏಕತಾ ಫೌಂಡೇಶನ್‍ನ ಪ್ರಮುಖರಾದ ಶ್ರೀ ರವೀಂದ್ರ ಸ್ವಾಮಿಯವರು ಡಾ. ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಭೀಕರನ್ನು ಉದ್ದೇಶಿಸಿ ಮಾತನಾಡಿ ಸರ್ವಜನಾಂಗದ ಶಾಂತಿಯ ತೋಟವಾದ ಈ ಭಾರತ ದೇಶದಲ್ಲಿ ಎಲ್ಲಾ ಜಾತಿ ಜನಾಂಗದವರನ್ನು ಬದುಕಲು ಕಲಿಸಿದವರು ಡಾ. ಬಾಬಾ ಸಾಹೇಬರು. ಅಂದು ಅವರು ಸಂವಿಧಾನ ನೀಡುತ್ತಿರಲಿಲ್ಲ ಎಂದರೆ ಇಂದು ದೇಶದ ಜನತೆ ಸ್ವತಂತ್ರವಾಗಿ ಬಾಳುತ್ತಿರಲಿಲ್ಲ. ಅಂತಹ ಅತ್ಯಮೂಲ್ಯ ಭಂಡಾರ ಸಂವಿಧಾನವಾಗಿದೆ. ಅದಕ್ಕೆ ಎಲ್ಲರೂ ಗೌರವಿಸೋಣ. ಬಾಬಾ ಸಾಹೇಬರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದು ರವೀಂದ್ರ ಸ್ವಾಮಿ ತಿಳಿಸಿದರು.

ಮುಂದುವರೆದು ಮಾತನಾಡಿದ ಶ್ರೀ ರವೀಂದ್ರ ಸ್ವಾಮಿಯವರು ತಾಲೂಕಿನಲ್ಲಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಕ್ಷೇತ್ರದ ಜನತೆಗೆ ಮೋಸ ಮಾಡಲಾಗುತ್ತಿದೆ. ಕಾನೂನಿನ ಪ್ರಕಾರ ಅಧಿಕಾರದಲ್ಲಿದ್ದವರು ಮಾತ್ರ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಆದರೆ ಶಾಸಕರು ತಮ್ಮ ಮಗನಿಗೆ ಕಳುಹಿಸಿ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದು ಕೇವಲ ನನ್ನ ಹೋರಾಟವಲ್ಲ. ಇಡೀ ಕ್ಷೇತ್ರದ ಜನರ ಶ್ರೇಯೋಭಿವೃದ್ಧಿಗಾಗಿ ನನ್ನ ಹೋರಾಟ ನಡೆಯುತ್ತಿದೆ. ಸಂವಿಧಾನ ರಕ್ಷಿಸಿ ಹೋರಾಟ ಆರಂಭ ಮಾಡುವ ಅವಶ್ಯಕತೆ ಇದೆ. ಸಂವಿಧಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುವವರು ಯಾರೇ ಇರಲಿ. ಜನತೆ ಅವರನ್ನು ತಕ್ಕ ಪಾಠ ಕಲಿಸಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಳತ್ ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೌತಮ ಮನಸೂಡೆ, ಸದಸ್ಯರಾದ ಸಂಜೀವಕುಮಾರ ಪಾಟೀಲ, ಪ್ರಮುಖರಾದ ರಶೀದ್ ಸಾಬ್, ಧನರಾಜ ಭನಸೂಡೆ, ಶಿವಕುಮಾರ ಸ್ವಾಮಿ ಹಿರೇಮಠ, ಕಿರಣ ಪಾಟೀಲ ಚಿಕ್ಲಿ, ನವ್ಯ ಬಾಲಾಜಿ, ಖುಷಿ ಗೌತಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.