ಸರ್ವಜನರ ಪ್ರಗತಿಗೆ ಸಂವಿಧಾನ ಬುನಾದಿಸ

ಚಿತ್ರದುರ್ಗ.ಡಿ.೬; ಜಗತ್ತಿನಲ್ಲಿ ಜಾತ್ಯತೀತ, ಧರ್ಮಾತೀತ ಕಾರ್ಯದಡಿ ಸರ್ವಜನರ ಭವಿಷ್ಯಕ್ಕೆ ತನ್ನ ಬದುಕನ್ನೇ ಮುಡಿಪಾಗಿಟ್ಟ ಜಗತ್ತಿನ ಬೆರಳೆಣಿಕೆ ಮಹಾಪುರುಷರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಅಭಿಪ್ರಾಯಪಟ್ಟರು.
ತಾಲೂಕಿನ ಕಾತ್ರಾಳ್ ಸಮೀಪದ ಕೆ.ಬಳ್ಳೆಕಟ್ಟೆ ಗ್ರಾಮದಲ್ಲಿ ಆಯೋಜಿಸಿದ್ದ ಜೈಭೀಮ್ ವೃತ್ತ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣ, ಬುದ್ಧ, ಗಾಂಧಿ, ಸ್ವಾಮಿ ವಿವೇಕಾನಂದ ಸೇರಿದಂತೆ ಅನೇಕರು ಮಾನವ ಕುಲದ ಉಳಿವು, ಬೆಳವಣಿಗೆಗೆ ಹೋರಾಡಿದ್ದಾರೆ. ಆದರೆ, ಇವರೆಲ್ಲರನ್ನೂ ಒಂದು ಧರ್ಮ, ಜಾತಿ, ಸಿದ್ಧಾಂತದ ಸಂಕೋಲೆಗೆ ಕಟ್ಟಿಹಾಕುವ ಪ್ರಯತ್ನ ಸದಾ ನಡೆಯುತ್ತಿದೆ. ಇದೇ ರೀತಿ ಅಂಬೇಡ್ಕರ್ ಅವರನ್ನು ದಲಿತ ವರ್ಗದ ಜಾತಿ ಬೇಲಿಯಲ್ಲಿ ಸಿಲಿಕಿಸಲು ಪಟ್ಟಭದ್ರರು ಸದಾ ಯತ್ನ ನಡೆಸುತ್ತಿದ್ದು, ಅವರ ಕಾರ್ಯ ವಿಫಲವಾಗುತ್ತಿದೆ ಇದಕ್ಕೆ ಕಾರಣ ದೇಶದಲ್ಲಿ ಜನ ಜಾಗೃತರಾಗುತ್ತಿರುವುದು ಎಂದರು.
ಮಹಿಳೆಯರು, ರೈತರು, ಕಾರ್ಮಿಕರು, ಶ್ರಮಿಕರು, ವಿದ್ಯಾವಂತರು ಸೇರಿದಂತೆ ವಿವಿಧ ಜಾತಿ, ಧರ್ಮದ ಜನರು, ಅಂಬೇಡ್ಕರ್ ಅವರು ತಮಗಾಗಿ ತಮ್ಮ ಬದುಕು ಅರ್ಪಿಸಿದ್ದನ್ನು ಅರ್ಥೈಸಿಕೊಂಡಿರುವುದು ಪ್ರಮುಖ ಕಾರಣ ಆಗಿದೆ. ಪುರುಷರಿಗೆ ಸರಿಸಮಾನಾಗಿ ಮಹಿಳೆಯರಿಗೆ ಬದುಕುವ ಹಕ್ಕು. ಎಲ್ಲ ಜಾತಿ, ಧರ್ಮದ ಜನರಿಗೆ ಶಿಕ್ಷಣದ ಹಕ್ಕು, ಮಹಿಳೆಗೆ ಶಿಕ್ಷಣ, ಆಸ್ತಿಯ ಹಕ್ಕು, ನೊಂದ ಜನರಿಗೆ ಮೀಸಲಾತಿ ಹೀಗೆ ಧರ್ಮಾತೀತವಾಗಿ ಎಲ್ಲ ವರ್ಗದ ನೊಂದ ಜನರ ಹಿತಕ್ಕಾಗಿ ಸಂವಿಧಾನ ರಚನೆ ಮೂಲಕ ಸ್ವ ಬದುಕು ಸಮರ್ಪಣೆ ಮಾಡಿದ ಮಹಾಮಾನವತವಾದಿ ಅಂಬೇಡ್ಕರ್ ಎಂಬುದು ಜಗಜ್ಜಾಹೀರಾ ಆಗಿದೆ ಎಂದರು. ಕಣ್ಣೀರಿನಲ್ಲಿದ್ದ ಜನರಿಗೆ ನೆಮ್ಮದಿ ಬದುಕು ಕಟ್ಟಿಕೊಡಲು, ಅಬಲೆ ಮಹಿಳೆಯರಿಗೆ ಸಮಾಜದಲ್ಲಿ ಪುರುಷನಿಗೆ ಸರಿಸಮನಾಗಿ ಜೀವಿಸಲು, ಅಶಕ್ತ, ಶ್ರಮಿಕ, ರೈತ, ಕೃಷಿ ಕಾರ್ಮಿಕರ ಹಿತಕ್ಕಾಗಿ ಶ್ರಮಿಸುವ ಮೂಲಕ ಜಾತಿ ಸಂಕೋಲೆಗಳನ್ನು ಮೀರಿದ ಅಂಬೇಡ್ಕರ್ ಜಗತ್ತಿನ ಮಾನವ ಧರ್ಮದ ನೇತಾರ ಆಗಿದ್ದಾರೆ ಎಂದು ಬಣ್ಣಿಸಿದರು.

ನಾಡಿನಲ್ಲಿರುವ ಹತ್ತಾರು ಮಠಗಳು ಬಸವಣ್ಣ, ಅಂಬೇಡ್ಕರ್ ಚಿಂತನೆಗಳ ಖಜಾನೆಗಳು ರೀತಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿವೆ ಅನ್ನ, ಅಕ್ಷರ, ಜ್ಞಾನ ದಾಸೋಹದ ಮೂಲಕ ನಾಡಿನ ಜನರನ್ನು ವೈಜ್ಞಾನಿಕವಾಗಿ ಜಾಗೃತಗೊಳಿಸುವ ಕೆಲಸವನ್ನು ನಮ್ಮ ಮಠಾಧೀಶರು ಮಾಡುತ್ತಿದ್ದಾರೆ ಎಂದು ಶ್ಲಾಘೀಸಿದರು.
ಮುಖಂಡರಾದ ಹಾಲೇಶಪ್ಪ, ಮಲ್ಲೇಶ, ಚೌಡಪ್ಪ, ಮಹಂತೇಶ್, ಮಂಜುನಾಥ್ ಉಪಸ್ಥಿತರಿದ್ದರು.