ಸರ್ಕಾರ ಸ್ಪಷ್ಟ ಭರವಸೆ ನೀಡುವವರೆಗೆ ಮುಷ್ಕರ ಮುಂದುವರಿಕೆ: ಕೆ.ಪರಮೇಶ್

ಸಂಜೆವಾಣಿ ವಾರ್ತೆ
ಮಂಡ್ಯ : ಡಿ.09:- ಸೇವಾ ಖಾಯಮಾತಿಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು ನಡೆಸುತ್ತಿರುವ ತರಗತಿ ಬಹಿμÁ್ಕರ ಮುಷ್ಕರ ಐದನೇ ದಿನಕ್ಕೆ ಕಾಲಿರಿಸಿದೆ. ನಮ್ಮಗಳ ಸೇವೆ ಕಾಯಂ ಬಗ್ಗೆ ಸರ್ಕಾರದಿಂದ ಸ್ಪಷ್ಟ ಭರವಸೆ ಸಿಗುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಯಲಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಕೆ.ಪರಮೇಶ್ ತಿಳಿಸಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಸ್ಥಳದಲ್ಲಿ ಏಳೆಂಟು ಸಾವಿರ ಅತಿಥಿ ಉಪನ್ಯಾಸಕರು ಭಾಗವಹಿಸಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದರು. ಸರ್ಕಾರದಿಂದ ಸ್ಪಷ್ಟ ಮಾಹಿತಿ ಸಿಗಲಿಲ್ಲ. ಇದಕ್ಕಾಗಿ ಕಾಲಾವಕಾಶ ಕೇಳಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಆದ್ದರಿಂದ ತಮ್ಮ ಮುಷ್ಕರ ಮುಂದುವರಿಯಲಿದೆ ಎಂದರು.
ಮದ್ದೂರು ಕಾಲೇಜಿನ ಅತಿಥಿ ಉಪನ್ಯಾಸಕಿ ಡಾ.ಸೌಭಾಗ್ಯ ಮಾತನಾಡಿ ಎಲ್ಲಾ ವಿದ್ಯಾರ್ಹತೆ ಪಡೆದು ಕಳೆದ ಇಪ್ಪತ್ತು ವರ್ಷಗಳಿಂದ ಬೋಧನೆಯಲ್ಲಿ ನಿರತರಾಗಿದ್ದೇವೆ. ಸತತವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ನಮ್ಮ ಬೇಡಿಕೆ ಈಡೇರಿಲ್ಲ. ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಮಾತನಾಡುವವರು ನಮಗಾಗುತ್ತಿರುವ ಅನ್ಯಾಯದ ಬಗ್ಗೆ ಯೋಚಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರದಿಂದ ಸ್ಪಷ್ಟ ನಿರ್ಧಾರ ಬರುವವರೆಗೆ ತಮ್ಮ ಮುಷ್ಕರ ಮುಂದುವರಿಯುತ್ತದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಜಿ.ವಿ.ರಮೇಶ್, ಉಪಾಧ್ಯಕ್ಷ ಡಾ.ಎಂ.ಎಸ್.ಚಲುವರಾಜು, ಸಂಘದ ಕಾರ್ಯದರ್ಶಿ ಡಾ.ಗಣೇಶ್,ಕಾನೂನು ಸಲಹೆಗಾರ ಅಭಿನಂದನ್,ಸಂಘಟನಾ ಕಾರ್ಯದರ್ಶಿಗಳಾದ ಕುಮಾರ್.ಬಿಆರ್, ಡಾ.ಉಮಾಕಾಂತ್, ಲಕ್ಷ್ಮೀಕಾಂತ್, ಡಾ.ಸತೀಶ್, ಪಿ.ಶಿವಕುಮಾರ್,ಎಂಸಿ.ಮಹೇಶ್, ಬೇಬಿಕಲಾ, ನಾಗರತ್ನಜೆ.ಎಂ, ಭಾರ್ಗವಿ.ಬಿ.ಆರ್,ಅರ್ಚನಾಶ್ರೀ,ಪ್ರವೀಣ, ಸೌಭಾಗ್ಯ, ಡಿ.ಇ.ಪವಿತ್ರಾ, ಪರಶಿವಮೂರ್ತಿ ಮುಂತಾದವರು ಭಾಗವಹಿಸಿದ್ದರು.