ಸರ್ಕಾರ ಸಫಾಯಿ ಕರ್ಮಚಾರಿಗಳ ಸಮಸ್ಯೆಗಳಿಗೆ ಸ್ಪಂದಿಸಲಿ

ರಾಯಚೂರು.ನ.೨೫- ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ ಸಫಾಯಿ ಕರ್ಮಚಾರಿಗಳನ್ನೊಳಗೊಂಡರೆ ಮಾತ್ರ ಸಫಾಯಿ ಕರ್ಮಚಾರಿಗಳ ಸಮಸ್ಯೆಗಳಿಗೆ ಸರಕಾರದಿಂದ ಸ್ಪಂದನೆ ಸಿಗುವ ಸಾಧ್ಯತೆಗಳಿವೆ ಎಂದು ರಾಷ್ಟ್ರೀಯ ಸಫಾಯಿ ಮಜ್ದೂರ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಬಾಬು ಅಭಿಪ್ರಾಯಪಟ್ಟರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ನಾವು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಬೇಕಾದ ಅನಿವಾರ್ಯತೆ ಎದುರಾಗಿದ್ದು ಇಂತಹ ಸ್ಥಿತಿಯಲ್ಲಿ ಕರ್ಮಚಾರಿಗಳಲ್ಲದವರು ನಮ್ಮ ಸ್ಥಿತಿ ಗತಿಗಳ ಕುರಿತು ಸರಕಾರ ವರದಿ ನೀಡುವುದು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಾದಂತಾಗುತ್ತದೆ. ಆದ್ದರಿಂದ ಸರಕಾರ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ಆಯೋಗವೇ ಇರಲಿ, ನಿಗಮವೇ ಇರಲಿ ಅದರಲ್ಲಿ ಸಫಾಯಿ ಕರ್ಮಚಾರಿಗಳು ಪಾಲ್ಗೊಳ್ಳುವಂತಾದರೆ ನಿಜವಾದ ಫಲಾನುಭವಿಗಳು ಸರಕಾರದ ಸೌಲಭ್ಯಗಳು ದೊರೆಯುವಂತಾಗುತ್ತದೆ ಆ ನಿಟ್ಟಿನಲ್ಲಿ ಸಚಿವ ಎನ್.ಎಸ್.ಭೋಸರಾಜ ಅವರ ನೇತೃತ್ವದಲ್ಲಿ ನಮ್ಮ ಜನಾಂಗದ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಕಂಡು ನಮ್ಮ ಬೇಡಿಕೆಗಳನ್ನು ಮಂಡಿಸಲಾಗುತ್ತದೆ ಎಂದು ಹೇಳಿದರು.
ಪ್ರೇಮ್ ಚಂದ್, ರಮೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.