ಸರ್ಕಾರ ವ್ಯಂಗ್ಯಚಿತ್ರ ಅಕಾಡಮಿ ಸ್ಥಾಪಿಸಿ ವ್ಯಂಗ್ಯಚಿತ್ರ ಕ್ಷೇತ್ರವನ್ನು ಉಳಿಸಬೇಕಿದೆ – ಎಂ.ಸಂಜೀವ್

ಸಾಧಾಗಿರಿ ಅರುಣ್ ನಂದಗಿರಿ ಕೃತಿ ಲೋಕಾರ್ಪಣೆ
ರಾಯಚೂರು, ಜು.೧೯- ನಾಡಿನ ಖ್ಯಾತ ವ್ಯಂಗ್ಯ ಚಿತ್ರಕಾರ ಎಂದೇ ಗುರುತಿಸಿಕೊಂಡಿದ್ದ ಅರಣ್ ನಂದಗಿರಿ ಅವರ ಜೀವನ ವ್ಯಂಗ್ಯ ಚಿತ್ರಯಾನ ಕುರಿತು ವ್ಯಂಗ್ಯ ಚಿತ್ರಕಾರರಾದ ಈರಣ್ಣ ಬೆಂಗಾಲಿ ಅವರು ಪುಸ್ತಕ ಬರೆದಿರುವುದು ಅತ್ಯಂತ ಪ್ರಶಂಸನೀಯ ಎಂದು ಕಲಬುರ್ಗಿಯ ವ್ಯಂಗ್ಯ ಚಿತ್ರಕಾರ ಎಂ ಸಂಜೀವ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುರಭಿ ಸಾಂಸ್ಕೃತಿಕ ಬಳಗ ವತಿಯಿಂದ ಈರಣ್ಣ ಬೆಂಗಾಲಿ ಅವರ ಸಾಧನಾಗಿರಿ ಅರುಣ್ ನಂದಗಿರಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು,ಅರುಣ್ ನಂದಗಿರಿ ಅಂಗವೈಕಲ್ಯದಿಂದ ಬಳಲುತ್ತಿದ್ದರೂ,ತಮ್ಮ ಅಭಿವ್ಯಕ್ತಿಗೆ ವ್ಯಂಗ್ಯಚಿತ್ರ ಕ್ಷೇತ್ರ ಆಯ್ದುಕೊಂಡು ಆ ಕ್ಷೇತ್ರದಲ್ಲಿ ಆತ ತೋರಿದ ಪ್ರತಿಭೆ,ಮಾಡಿದ ಸಾಧನೆ ಅಪ್ರತಿಮವಾದುದು.ನಂದಗಿರಿಯವರ ಸಮಗ್ರ ಜೀವನ – ಸಾಧನೆ ಕುರಿತಾದ ಈ ಪುಸ್ತಕ ಅತ್ಯಂತ ಉಪಯುಕ್ತವಾಗಿದೆ.ಇದು ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಕೃತಿಯಲ್ಲಿನ ವ್ಯಂಗ್ಯಚಿತ್ರಗಳು ಓದುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ.ವ್ಯಂಗ್ಯಚಿತ್ರಗಳ ಸಂಕಲನ,ವ್ಯಂಗ್ಯಚಿತ್ರಕಾರರ ಕುರಿತು ಪುಸ್ತಕ ಪ್ರಕಟವಾಗುವುದು ತುಂಬ ಅಪರೂಪ ಈ ಅಪರೂಪದ ಕಾರ್ಯವನ್ನು ಮಾಡಿದ ವ್ಯಂಗ್ಯಚಿತ್ರಕಲಾವಿದ ಈರಣ್ಣ ಬೆಂಗಾಲಿ ಅವರು ಸ್ತುತ್ಯಾರ್ಹರು.ಸರಕಾರ ವ್ಯಂಗ್ಯಚಿತ್ರ ಅಕಾಡಮಿ ಸ್ಥಾಪಿಸುವುದರ ಮೂಲಕ ವ್ಯಂಗ್ಯಚಿತ್ರ ಕ್ಷೇತ್ರವನ್ನು ಉಳಿಸಬೇಕಾಗಿದೆ . ವ್ಯಂಗ್ಯಚಿತ್ರಕಾರರಿಗೆ ನೆರವಾಗಬೇಕಿದೆ ಎಂದರು.
ಸಾಹಿತಿ ವೀರಹನುಮಾನ್ ಮಾತನಾಡಿ,ಅರುಣ್ ನಂದಗಿರಿ ನಮ್ಮೊಡನಿದ್ದ ಪ್ರತಿಭಾವಂತ ಕಲಾವಿದ.ಸಾಧಕ ಸಾಧಿಸುವ ಮನಸೊಂದಿದ್ದರೆ ದೈಹಿಕ ಅಂಗವೈಕಲ್ಯ ಸಾಧನೆಗೆ ಅಡ್ಡಿಯಾಗದು ಎಂಬುದನ್ನು ಸಾಬೀತು ಪಡಿಸಿದ ಅಪರೂಪದ ಚೇತನ.ಎಲ್ಲಾ ಇದ್ದು ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಯುವಜನಕ್ಕೆ ಮಾದರಿ ಎಂದರು.
ಲೇಖಕ ಈರಣ್ಣ ಬೆಂಗಾಲಿ ಮಾತನಾಡಿ,ಅರುಣ್ ನಂದಗಿರಿಯ ದೇಹವು ಬಹುತೇಕ ಭಾಗವು ಅಂಗವೈಕಲ್ಯತೆಗೆ ತುತ್ತಾಗಿದ್ದು,ಆ ಅವಸ್ಥೆಯಲ್ಲೂ ವ್ಯಂಗ್ಯಚಿತ್ರಗಳನ್ನು ರಚಿಸಿ,ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವುದು ಶ್ಲಾಘನೀಯ ಎಂದರು.
ಅರುಣ್ ಅವರ ವ್ಯಂಗ್ಯಚಿತ್ರಗಳು ನಾಡಿನ ವಿವಿಧ ದಿನಪತ್ರಿಕೆ,ವಾರಪತ್ರಿಕೆ,ಮಾಸಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದವು. ಕೃತಿಯನ್ನು ಪ್ರಕಟಿಸಲು ನೆರವಾದ ಅರುಣ್ ಪರಿವಾರವನ್ನು ನಾವೆಲ್ಲಾ ಸ್ಮರಿಸಲೇಬೇಕು.
ಅರುಣ್ ಅವರಿಗೆ ಮತ್ತು ಕಲಾಕ್ಷೇತ್ರಕ್ಕೆ ಅರುಣ್ ನಂದಗಿರಿಯ ಪರಿವಾರ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ.ಅರುಣ್ ಅವರ ಒಡನಾಡಿಯಾಗಿದ್ದ ಫಲವಾಗಿ ಈ ಕೃತಿ ಬರೆಯಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸುರಭಿ ಸಾಂಸ್ಕೃತಿಕ ಬಳಗ ಅಧ್ಯಕ್ಷ ಜಿ ಸುರೇಶ್,ರಾಜಶ್ರೀ ಕಲ್ಲೂರಕರ್ ಇದ್ದರು.